ಅಯೋಧ್ಯೆ/ಉಡುಪಿ: ಅಯೋಧ್ಯೆ ರಾಮಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿತವಾಗಿರುವ ಶ್ರೀರಾಮ ದರ್ಬಾರ್ ನಲ್ಲಿರುವ ಶ್ರೀರಾಮಪಟ್ಟಾಭಿಷೇಕದ ಶ್ರೀರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯ ವಿಗ್ರಹಗಳಿಗೆ ಉಡುಪಿಯಿಂದ ಸ್ವರ್ಣಾಭರಣಗಳನ್ನು ತಯಾರಿಸಿ ಅರ್ಪಿಸಲಾಗಿದೆ.

ಮಂದಿರದ ಟ್ರಸ್ಟ್ ನವರ ಮನವಿಯಂತೆ ಉಡುಪಿಯ ಪ್ರಸಿದ್ದ ಸ್ವರ್ಣ ಜ್ಯುವೆಲರ್ಸ್ ನವರು ಕೇವಲ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಸೋಮವಾರ (ನ.24) ಸಂಸ್ಥೆಯ ಗುಜ್ಜಾಡಿ ದೀಪಕ್ ನಾಯಕ್ ಮತ್ತಿತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಶಿಲಾ ವಿಗ್ರಹಳಿಗೆ ತೊಡಿಸಿದ್ದಾರೆ.
ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಗುಜ್ಜಾಡಿ ರಾಮದಾಸ ನಾಯಕರು ಇದೊಂದು ನಿಜವಾಗಿಯೂ ನಮಗೆ ಅಪೂರ್ವ ಅವಕಾಶ. ಗುರುಹಿರಿಯರ ಪುಣ್ಯದಿಂದ ಲಭಿಸಿದೆ. ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರಧಾನಮಂತ್ರಿಯವರಿಂದ ಭಗವಾಧ್ವಜಾರೋಹಣದ ಹೊತ್ತಲ್ಲೇ ಈ ಆಭರಣ ತಯಾರಿಯ ಅವಕಾಶ ದೊರೆತದ್ದು ನಮ್ಮ “ಸ್ವರ್ಣ” ಕುಟುಂಬಕ್ಕೆ ಶಾಶ್ವತ ಸ್ಮರಣೀಯ ಕ್ಷಣವಾಗಿದೆ.
ಈ ಹಿಂದೆ ಕಾಶಿ ಮಠಾಧೀಶರ ಆದೇಶದಂತೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ, ಸ್ವರ್ಣ ಅಟ್ಟೆ ಪ್ರಭಾವಳಿ ಕಂಠಿಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ದೊರೆತಿತ್ತು ಎಂದೂ ಅವರು ಸ್ಮರಿಸಿದ್ದಾರೆ.
ಈ ಆಭರಣಗಳಲ್ಲಿ ಕಿರೀಟ, ಕರ್ಣ ಕುಂಡಲ, ತಿಲಕ, ಸಣ್ಣ ಮತ್ತು ಉದ್ದ ಹಾರಗಳು, ತೋಲ್ಪಟ್ಟಿ / ತೋಳ್ಕೊಂಧಿ, ಕಡ/ಕಂಕಣ, ನೂಪರ (ಕಾಲಿನ ಗೆಜ್ಜೆ) ಇತ್ಯಾದಿ ಸೇರಿವೆ. ಎಲ್ಲಾ ಆಭರಣಗಳನ್ನು ಶ್ರೀ ರಾಮ ದೇವಾಲಯ ಟ್ರಸ್ಟ್ ನೀಡಿದ ಮಾರ್ಗಸೂಚಿ ಪ್ರಕಾರ ತಯಾರಿಸಲಾಗಿದೆ. ಈ ಆದೇಶ ದೃಢೀಕರಣ ಪತ್ರವನ್ನು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರು ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಪ್ರೈವೆಟ್ ಲಿಮಿಟೆಡ್‌ನ ಸಿಒಒ ದೀಪಕ್ ರಾಮದಾಸ್ ನಾಯಕ್ ಅವರಿಗೆ ನೀಡಿದ್ದಾರೆ.
ಸೋಮವಾರ, ಎಲ್ಲಾ ಆಭರಣಗಳನ್ನು ಪರಿಶೀಲಿಸಿದ ನಂತರ ಅಯೋಧ್ಯೆಗೆ ತಲುಪಿಸಲಾಗಿದ್ದು, ಈ ಸಂದರ್ಭದಲ್ಲಿ ದೀಪಕ್ ಆರ್ ನಾಯಕ್ (ಸಿಒಒ), ವರುಣ್ ಆರ್ ನಾಯಕ್ (ಸಿಎಫ್‌ಒ), ಮತ್ತು ಶೈಲೇಶ್ ಆರ್ ನಾಯಕ್ ಉಪಸ್ಥಿತರಿದ್ದರು.




