ಹಾಸನ :ಖಾಸಗಿ ಶಾಲೆಯ ಶಿಕ್ಷಕಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಬಾಲಕನಿಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ ಎನ್ನಲಾಗ್ತಿದೆ. ಒಂದನೇ ತರಗತಿ ಓದುತ್ತಿರುವ ದಿವಾಕರ್‌ಗೌಡ ಎಂಬ ವಿದ್ಯಾರ್ಥಿಗೆ ಶಿಕ್ಷಕಿ ರಜನಿ ಹೊಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಾಲಕನಿಗೆ ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಶಿಕ್ಷಕಿ ವಿರುದ್ಧ ಪೋಷಕರ ಆಕ್ರೋಶ
ಬಾಲಕನ ತಂದೆ ರಂಗಸ್ವಾಮಿ ಮತ್ತು ತಾಯಿ ಕಾವ್ಯ ಎಂಬುವರು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸಿದ್ರು. ಮಗ ಚೆನ್ನಾಗಿ ಓದಲಿ ಅಂತ ಮಡಬಲು ಗ್ರಾಮದ ದಂಪತಿ ಖಾಸಗಿ ಶಾಲೆಗೆ ಸೇರಿದ್ರು. ಆದ್ರೆ ಶಿಕ್ಷಕಿ ಮಗನಿಗೆ ಬಾಸುಂಡೆ ಬರುವಂತೆ ಹೊಡೆದಿರುವುದನ್ನು ಕಂಡು ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಠಾಣೆಗೆ ದೂರು ಸಿದ್ಧತೆ
ಶಿಕ್ಷಕಿಯಿಂದ ಥಳಿತಕ್ಕೊಳಗಾದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಕುರಿತು ಗಾಯಾಳು ಬಾಲಕನ ಪೋಷಕರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.




