ಮಧ್ಯಪ್ರದೇಶ: ಮದ್ಯದ ಅಮಲಿನಲ್ಲಿದ್ದ ಶಿಕ್ಷಕನೊರ್ವ ವಿದ್ಯಾರ್ಥಿಯ ಜಡೆ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕರ ದಿನದಂದು ಗುರುವಾರ (ಸೆ.05) ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಶಿಕ್ಷಕ ವೀರ್ ಸಿಂಗ್ ಮೇಧಾನನ್ನು ಅಮಾನತುಗೊಳಿಸಲಾಗಿದೆ ಮತ್ತು ಈತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೇಮಲಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಅಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ತರಗತಿಯ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಶಿಕ್ಷಕ ಬಾಲಕಿಯ ಕೂದಲು ಕತ್ತರಿಸುವುದನ್ನು ಕಂಡು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ.
ಬಾಲಕಿಯ ಕೂದಲು ಕತ್ತರಿಸದಂತೆ ಗ್ರಾಮಸ್ಥರು ತಡೆದರೂ ಕೂಡ “ನೀವು ವೀಡಿಯೊ ಮಾಡಿ, ಆದರೆ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಶಿಕ್ಷಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವ್ಯಾಪಕವಾಗಿ ವೈರಲ್ ಆಗಿರುವ ವೀಡಿಯೊ ಅಂತಿಮವಾಗಿ ಕಲೆಕ್ಟರ್ ವರೆಗೆ ತಲುಪಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ. ಬಾಲಕಿಯ ಹೇಳಿಕೆ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೇಧಾ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಾಥಮ್ ತಿಳಿಸಿದ್ದಾರೆ.