ಕಾರ್ಕಳ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದ ಮೇರೆಗೆ ಶಿಕ್ಷಕನನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನೆ ನ. 17ರಂದು ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು.

ಮೂಲತಃ ಕಲಬುರಗಿ ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಜಾಗೊಂಡ ಶಿಕ್ಷಕ.ಈ ಶಿಕ್ಷಕ 2025ರ ಜೂನ್ ತಿಂಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಗೆ ಅತಿಥಿ ಶಿಕ್ಷಕರಾಗಿ ಇಲ್ಲಿಗೆ ಸೇರ್ಪಡೆಗೊಂಡಿದ್ದರು.
ವಿದ್ಯಾರ್ಥಿಗಳಿಗೆ 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ದಕ್ಕೆ ಬರುವಂತ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಸೂಚಿಸುವುದು ಸಹಿತ ಮೊದಲಾದ ಶಿಕ್ಷೆಗಳನ್ನು ನೀಡುತ್ತಿದ್ದರು ಎಂದು ಮಕ್ಕಳು, ಪೋಷಕರು ಆರೋಪಿಸಿದ್ದಾರೆ.
ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದಾರ್ಗೆ ಈ ಬಗ್ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಕಾಂದರ್ನನ್ನು ಪ್ರಾಂಶುಪಾಲರು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
ಮಿಯ್ಯಾರಿನ ಮೊರಾರ್ಜಿ ದೇಸಾಯಿ ಶಾಲೆ ಉತ್ತಮ ಫಲಿತಾಂಶವನ್ನು ಹೊಂದಿದೆ.
ಬೇರೆ ಬೇರೆ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಮಕಾಂದರ್ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು, ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಹೇಳಿದ್ದಾರೆ. ಜನಿವಾರ ತೆಗೆದಿಸುವುದು ಒಂದು ಧರ್ಮಕ್ಕೆ ನೊವುಂಟು ಮಾಡುವ ವಿಚಾರ. ಆದರೆ ಈ ಬಗ್ಗೆ ಮಕಾಂದರ್ ಅವರಲ್ಲಿ ಪ್ರಶ್ನಿಸಿದಾಗ ಜನಿವಾರ ಎಂದರೆ ಏನು ಎಂದು ಗೊತ್ತಿಲ್ಲ ಅನ್ನುವ ಉಡಾಫೆ ಮಾತನ್ನು ಆಡುತ್ತಾರೆ. ಮಿಯ್ಯಾರಿನಲ್ಲಿ ನಾವು ಸರ್ವಧರ್ಮಿಯರು ಅನ್ನೋನ್ಯತೆಯಿಂದ ಇದ್ದೇವೆ. ಆದರೆ, ಮಕಾಂದರ್ ಅವರ ಈ ರೀತಿಯ ವರ್ತನೆ ಧರ್ಮಗಳ ನಡುವೆ ಒಡಕು ಉಂಟು ಮಾಡಲಿದೆ. ಇನ್ನು ಮುಂದೆ ಈ ರೀತಿಯ ಘಟನೆ ಎಲ್ಲಿಯೂ ನಡೆಯಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.




