’ದೇವಾಲಯದ ಹಣ ದೇವರಿಗೇ ಸೇರಿದ್ದು’: ಸುಪ್ರೀಂ ಕೋರ್ಟ್

Share with

ನವದೆಹಲಿ: ದೇವಾಲಯದ ಹಣ ದೇವರಿಗೆ ಸೇರಿದ್ದು, ಈ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್‌ಗಳನ್ನು ಉಳಿಸಲು ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ತಿರುನೆಲ್ಲಿ ದೇವಸ್ಥಾನ ದೇವಸ್ವಂಗೆ ಠೇವಣಿ ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಕೆಲವು ಸಹಕಾರಿ ಬ್ಯಾಂಕ್‌ಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಯಲ್ಯ ಬಾಗ್ನಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ನಿರ್ದೇಶನದಲ್ಲಿ ತಪ್ಪೇನಿದೆ ಎಂದು ಪೀಠವು ತೀಕ್ಷ್ಮವಾಗಿ ಪ್ರತಿಕ್ರಿಯಿಸಿತು.

ದೇವಾಲಯದ ಹಣದಿಂದ ಬ್ಯಾಂಕ್ ಉಳಿಸಲು ಬಳಸಬೇಕೇ? ಬ್ಯಾಂಕ್‌ಗಳು ಜನರ ವಿಶ್ವಾಸವನ್ನು ಗಳಿಸಬೇಕು. ಗ್ರಾಹಕರನ್ನು ಹಾಗೂ ಠೇವಣಿಗಳನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ ಅದು ನಿಮ್ಮ ಸಮಸ್ಯೆ ಎಂದು ಅರ್ಜಿಯನ್ನು ತಿರಸ್ಕರಿಸಿದೆ. ನೀವು ಬ್ಯಾಂಕ್ ಅನ್ನು ಉಳಿಸಲು ದೇವಾಲಯದ ಹಣವನ್ನು ಬಳಸಲು ಬಯಸುತ್ತೀರಾ? ದೇವಾಲಯದ ಹಣ ಬಹಳ ಕಷ್ಟದಿಂದ ಉಸಿರಾಡುತ್ತಿರುವ ಸಹಕಾರಿ ಬ್ಯಾಂಕಿನಲ್ಲಿರುವ ಬದಲು, ಗರಿಷ್ಠ ಬಡ್ಡಿಯನ್ನು ನೀಡಬಲ್ಲ ಆರೋಗ್ಯಕರ ರಾಷ್ಟ್ರೀಕೃತ ಬ್ಯಾಂಕ್‌ಗೆ ಹೋಗಬೇಕೆಂದು ನಿರ್ದೇಶಿಸುವುದರಲ್ಲಿ ತಪ್ಪೇನು? ಎಂದು ಸಿಜೆಐ ಸೂರ್ಯ ಕಾಂತ್ ಪ್ರಶ್ನಿಸಿದರು.

ದೇವಾಲಯದ ಹಣ, ಮೊದಲನೆಯದಾಗಿ, ದೇವರಿಗೆ ಸೇರಿದೆ. ಆದ್ದರಿಂದ, ಈ ಹಣವನ್ನು ದೇವಾಲಯದ ಹಿತಾಸಕ್ತಿಗಳಿಗಾಗಿ ಮಾತ್ರ ಉಳಿಸಬೇಕು, ರಕ್ಷಿಸಬೇಕು ಮತ್ತು ಬಳಸಬೇಕು. ಇದು ಸಹಕಾರಿ ಬ್ಯಾಂಕಿನ ಆದಾಯ ಅಥವಾ ಉಳಿವಿನ ಮೂಲವಾಗಲು ಸಾಧ್ಯವಿಲ್ಲ ಎಂದು ಸಿಜೆಐ ಹೇಳಿದರು.

ಅರ್ಜಿದಾರರ (ಬ್ಯಾಂಕ್‌ಗಳ) ಪರ ವಕೀಲರಾದ ಮನು ಕೃಷ್ಣನ್ ಜಿ, ಎರಡು ತಿಂಗಳೊಳಗೆ ಠೇವಣಿಗಳನ್ನು ಹಿಂದಿರುಗಿಸುವಂತೆ ಹೈಕೋರ್ಟ್ ಹೊರಡಿಸಿದ ಹಠಾತ್ ನಿರ್ದೇಶನ ತೊಂದರೆಗಳ ಉಂಟು ಮಾಡುತ್ತಿದೆ ಎಂದು ವಾದಿಸಿದರು. ನೀವು ಜನರಲ್ಲಿ ನಿಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಬೇಕು. ನೀವು ಗ್ರಾಹಕರನ್ನು ಮತ್ತು ಠೇವಣಿಗಳನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಸಮಸ್ಯೆ ಎಂದು ಸಿಜೆಐ ಹೇಳಿದ್ದಾರೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿಮಿಟೆಡ್ ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿಂಗ್ ಬ್ಯಾಂಕ್ ಲಿಮಿಟೆಡ್ ಮೇಲ್ಮನವಿಯನ್ನು ಸಲ್ಲಿಸಿತ್ತು. ಪದೇ ಪದೇ ವಿನಂತಿಸಿದರೂ ಸ್ಥಿರ ಠೇವಣಿಗಳನ್ನು ಮರುಪಾವತಿಸಲು ಸಹಕಾರಿ ಬ್ಯಾಂಕುಗಳು ನಿರಾಕರಿಸಿದ್ದರಿಂದ ಅಸಮಾಧಾನಗೊಂಡು ತಿರುನೆಲ್ಲಿ ದೇವಸ್ವಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ ಎರಡು ತಿಂಗಳೊಳಗೆ ಹಣ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶಿಸಿತ್ತು.


Share with

Leave a Reply

Your email address will not be published. Required fields are marked *