ಕಾರವಾರ: ಗೋಕರ್ಣದ ಬೆಟ್ಟದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ನೀನಾ ಕುಟಿನಾಳ ಪ್ರಿಯಕರ ಆಗಮಿಸಿದ್ದು, ಆತ ತಿಳಿಸಿರುವ ಕೆಲವು ವಿಷಯಗಳು ನೀನಾಳ ಹಲವು ರಹಸ್ಯಗಳನ್ನು ಬಯಲು ಮಾಡಿದೆ. ನೀನಾ ರಷ್ಯಾ ಪ್ರಜೆಯಾಗಿದ್ದು, ಇಸ್ರೇಲ್ ಪ್ರಜೆ, ಸ್ಪೇನ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಡೋರ್ ಗೋಲ್ಡ್ ಈಕೆಯ ಪ್ರಿಯಕರ ಎನ್ನಲಾಗಿದೆ. ಪ್ರಿಯಾ ಮತ್ತು ಅಮಾ ಮಕ್ಕಳು.
ಸುದ್ದಿಗಾರರ ಜತೆ ಮಾತನಾಡಿದ ಪ್ರಿಯಕರ, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರ ವರೆಗೂ ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ವರ್ಷದಲ್ಲಿ 6 ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ ರೂ.) ಹಣ ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೆ ಗೋವಾದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ನಾನು ಪಣಜಿಯಲ್ಲಿ ನಾಪತ್ತೆ ದೂರು ಕೊಟ್ಟಿದ್ದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜತೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ ಎಂದರು.
ನನ್ನ ಮಕ್ಕಳನ್ನು ನನಗೆ ಕೊಡಿಸಿ. ಅವರು ಸುರಕ್ಷಿತವಾದ ಜಾಗದಲ್ಲಿ ಬೆಳೆಯಬೇಕು. ಆರು ವರ್ಷವಾದರೂ ಶಿಕ್ಷಣ ಕೊಡಿಸಿಲ್ಲ. ಶಾಲೆಗೆ ಕಳಿಸಬೇಕು ಎಂದಿದ್ದಾರೆ. ಆದರೆ ಮಹಿಳೆ ಪ್ರಿಯಕರನ ಜತೆ ಮಕ್ಕಳನ್ನು ಕಳಿಸಲು ನಿರಾಕರಿಸುತ್ತಿದ್ದು, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ವಾದ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ನೀನಾ ಗುಹೆಯಲ್ಲಿದ್ದಾಗ ಒಂದು ಮಗುವಿಗೆ ಜನ್ಮ ನೀಡಿದ್ದು, ಈ ಎರಡು ಮಕ್ಕಳ ಹೊರತಾಗಿ ರಷ್ಯಾದಲ್ಲಿ ಇನ್ನೊಂದು ಮಗುವಿದೆ ಎಂದು ತಿಳಿದು ಬಂದಿದೆ.
ಜು.12ರಂದು ಗೋಕರ್ಣದ ರಾಮತೀರ್ಥ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆ ಹಾಗೂ 2 ಪುಟ್ಟ ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಸದ್ಯ ಆಕೆಯನ್ನು ತುಮಕೂರಿನಲ್ಲಿರುವ ಎಫ್‌ಆರ್‌ಸಿ ಕೇಂದ್ರಕ್ಕೆ ಕರೆತರಲಾಗಿದೆ.