ಬೋರ್ ವೆಲ್ ನೀರು ಕಲುಷಿತಗೊಳ್ಳಲು ಬಿಜೆಪಿ‌ ಆಡಳಿತವೇ ನೇರ ಹೊಣೆ

Share with



ತಮ್ಮ ತಪ್ಪನ್ನು ಮುಚ್ಚಿಹಾಕಲು ನನ್ನ ಮೇಲೆ ಗೂಬೆ ಕೂರಿಸಲು ಬಿಜೆಪಿ ಸದಸ್ಯರಿಂದ ವ್ಯವಸ್ಥಿತ ಸಂಚು

ಬಿಜೆಪಿ ಸದಸ್ಯರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್ ಗೆ ಸೇರಿದ್ದೇನೆ

ಬಿಜೆಪಿಗರ ನಿಜ ಬಣ್ಣವನ್ನು ಸದ್ಯದಲ್ಲಿಯೇ ಬಯಲು ಮಾಡುತ್ತೇನೆ

ಸುದ್ದಿಗೋಷ್ಠಿಯಲ್ಲಿ ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ.ನಾಯ್ಕ್ ಹೇಳಿಕೆ

ಉಡುಪಿ: ಬಿಜೆಪಿ‌ ಆಡಳಿತ ಅವಧಿಯಲ್ಲಿ ತೆಂಕನಿಡಿಯೂರು ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ಬಳಿ ಎಸ್.ಎಲ್.ಆರ್.ಎಮ್ ಘಟಕ ನಿರ್ಮಾಣ ಮಾಡಲಾಗಿದೆ.  ಅಲ್ಲದೆ, ಜುಲೈ 2ರ ವರೆಗೂ ಘಟಕದಲ್ಲಿ ಶೇಖರಣೆಗೊಂಡ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಬಿಜೆಪಿ ಬೆಂಬಲಿತ ಸದಸ್ಯರು ಕಾಲಹರಣ ಮಾಡಿದ್ದಾರೆ. ಇದರಿಂದಲೇ ಮನೆಗಳ ಬಾವಿ ನೀರು, ಬೋರ್‌ವೆಲ್ ನೀರು ಕಲುಷಿತಗೊಂಡಿದೆ. ಇದಕ್ಕೆ ಬಿಜೆಪಿ‌ ಆಡಳಿತವೇ ನೇರ ಹೊಣೆ ಎಂದು ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ.ನಾಯ್ಕ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರ್ ವೆಲ್ ಪಕ್ಕದಲ್ಲಿಯೇ ಎಸ್.ಎಲ್.ಆರ್.ಎಮ್ ಘಟಕ ನಿರ್ಮಾಣ ಮಾಡಿರುವುದರಿಂದ ಸುತ್ತಮುತ್ತಲಿನ ಬಾವಿಗಳ ನೀರು ಕಲುಷಿತಗೊಂಡಿದೆ. ಕುಡಿಯಲು ಸಾಧ್ಯವಾಗದೆ ಜನರು ಬವಣೆ ಪಡುವಂತೆ ಮಾಡಿರುವುದು ಕೂಡ ಬಿಜೆಪಿ ಸದಸ್ಯರೇ. ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ತನ್ನ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2015 ರಿಂದ ತೆಂಕನಿಡಿಯೂರು ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದ್ದು, 2019ರಲ್ಲಿ‌ ಕೆಳಾರ್ಕಳಬೆಟ್ಟು ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರ ವಿರೋಧದ ನಡುವೆಯೇ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಎಸ್.ಎಲ್.ಆರ್.ಎಮ್ ಘಟಕವನ್ನು ಬೋರ್ ವೆಲ್ ಪಕ್ಕದಲ್ಲಿಯೇ ನಿರ್ಮಾಣ ಮಾಡಲಾಗಿತ್ತು. 2019 ರಿಂದ 2024 ರ ಜುಲೈ 2ರ ತನಕ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಜಮೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಬಿಜೆಪಿ ಬೆಂಬಲಿತ ಸದಸ್ಯರು ಕಾಲಹರಣ ಮಾಡಿದ್ದಾರೆ. ಅವರೆಲ್ಲರ ಕಿರುಕುಳದಿಂದ ಬೇಸತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ನನ್ನ ವಿರುದ್ಧ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ತನ್ನ ವಿರುದ್ದ ಹಲ್ಲೆ ಜಾತಿ ನಿಂದನೆ ಮಾಡಿದ್ದು, ಈ ಬಗ್ಗೆ ಈಗಾಗಲೇ ಮಲ್ಪೆ ಠಾಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಿದ್ದೇನೆ ಎಂದರು.
ಜನರನ್ನು ದಾರಿ ತಪ್ಪಿಸಿ ತನ್ನ ಬೆಳೆ ಬೇಯಿಸುವ ಪ್ರಯತ್ನಕ್ಕೆ ಹೊರಟಿರುವ ಬಿಜೆಪಿಗರ ನಿಜ ಬಣ್ಣವನ್ನು ಸದ್ಯದಲ್ಲಿಯೇ ಬಯಲು ಮಾಡಲಾಗುವುದು. ಪ್ರಸ್ತುತ ನಮ್ಮ ಕಾಂಗ್ರೆಸ್ ಬೆಂಬಲಿತ ಆಡಳಿತ ತೆಂಕನಿಡಿಯೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಎಸ್.ಎಲ್.ಆರ್‌‌.ಎಮ್ ಘಟಕದ ಸಮಸ್ಯೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತೆಂಕನಿಡಿಯೂರು ಗ್ರಾ.ಪಂ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಸುರೇಶ್ ನಾಯ್ಕ್, ಸತೀಶ್ ನಾಯ್ಕ್, ವೆಂಕಟೇಶ್ ಕುಲಾಲ್, ರವಿರಾಜ್, ಶರತ್ ಶೆಟ್ಟಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *