ಕಾಲೇಜಿಗೆಂದು ಹೋದ ಯುವತಿಯರ ಮೃತದೇಹ ದೇವಸ್ಥಾನದ ಶೌಚಾಲಯದಲ್ಲಿ ನಿಗೂಢವಾಗಿ ಪತ್ತೆ!!

Share with

ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಇಬ್ಬರು ಯುವತಿಯರ ಮೃತದೇಹ ದೇವಸ್ಥಾನದ ಶೌಚಾಲಯದಲ್ಲಿ ನಿಗೂಢವಾಗಿ ಪತ್ತೆಯಾಗಿರುವ ಘಟನೆಯೊಂದು ಗುಜರಾತ್ ನಲ್ಲಿ ಶನಿವಾರ (ಮಾ.7) ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಬ್ಬರು ಯುವತಿಯರು ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯವರಲ್ಲಿ ಹೇಳಿ ಹೋಗಿದ್ದರು. ಆದರೆ ಮಧ್ಯಾಹ್ನವಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಪರಿಚಯಸ್ಥರಿಗೆ ಕರೆ ಮಾಡಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ, ಎಲ್ಲೂ ಪತ್ತೆಯಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಯುವತಿಯರ ಮೊಬೈಲ್ ಲೊಕೇಶನ್ ಸ್ವಾಮಿನಾರಾಯಣ ಮಂದಿರದ ಆವರಣದಲ್ಲಿರುವುದು ಪತ್ತೆಯಾಗಿದೆ. ಶನಿವಾರ ಮುಂಜಾನೆ ಮಂದಿರದ ಆವರಣದಲ್ಲಿ ಅವರ ಸ್ಕೂಟರ್‌ಗಳು ಪತ್ತೆಯಾಗಿತ್ತು.

ಪೊಲೀಸರು ಮಂದಿರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರೂ ಯುವತಿಯರು ಶೌಚಾಲಯದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಅಲ್ಲಿಗೆ ಧಾವಿಸಿದಾಗ ಶೌಚಾಲಯದ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಮುರಿದು ಒಳಹೋಗಿ ನೋಡಿದಾಗ ವಿದ್ಯಾರ್ಥಿನಿಯರು ಮೃತಪಟ್ಟಿರುವುದು ಕಂಡುಬಂದಿದೆ. ಅಲ್ಲದೆ ಶವಗಳ ಪಕ್ಕದಲ್ಲಿ ಒಂದು ಸಿರಿಂಜ್ ಮತ್ತು ಮೂರು ವಿಷಕಾರಿ ಔಷಧಿಯ ಬಾಟಲಿಗಳು ಪತ್ತೆಯಾಗಿವೆ.

ಪೊಲೀಸರ ತನಿಖೆ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯರು ತಮ್ಮ ಮೊಬೈಲ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಪ್ಲಾಟ್‌ಫಾರ್ಮ್ ಮೂಲಕ “ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ?” ಎಂದು ಹುಡುಕಾಟ ನಡೆಸಿದ್ದರು ಎಂಬುದು ತಿಳಿದುಬಂದಿದೆ.

ಸ್ಥಳದಲ್ಲಿ ಪತ್ತೆಯಾದ ಸಿರಿಂಜ್, ಔಷಧಿಯ ಬಾಟಲಿಗಳು ಮತ್ತು ಯುವತಿಯರ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *