ಉಡುಪಿ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದ ದಲಿತ ಯುವಕನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.
ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ.ಬೋರಲಿಂಗಯ್ಯ ಆಗಮಿಸಿ ಪ್ರಕರಣದ ಮಾಹಿತಿ, ಬೆಳವಣಿಗೆಗಳನ್ನು ಪಡೆದುಕೊಂಡರು. ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಮೂರು ತಂಡ ರಚನೆಯಾಗಿದ್ದು, ತನಿಖೆಯ ಪ್ರಗತಿ ಬಗ್ಗೆ ಐಜಿಪಿ ಬೋರಲಿಂಗಯ್ಯ ಮಾಹಿತಿ ಕಲೆ ಹಾಕಿದರು. ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದರು. ಟೆಕ್ನಿಕಲ್ ಎವಿಡೆನ್ಸ್ ಗಳ ಹಿಂದೆ ಬಿದ್ದಿರುವ ಖಾಕಿ ಪಡೆಗೆ, ಸುಪಾರಿ ಕಿಲ್ಲರ್ ಈ ಹತ್ಯೆ ಮಾಡಿರಬಹುದು ಎಂಬ ಬಲವಾದ ಶಂಕೆಯಿದೆ.
ಮೃತ ಕೃಷ್ಣ ಅವರ ಕುಟುಂಬಸ್ಥರು, ಗೆಳೆಯರಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಯಾವುದೇ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿಲ್ಲ. ಪ್ರಕರಣ ಸಂಬಂಧ ಕೆಲವು ಸಲಹೆಗಳನ್ನು ತನಿಖಾ ತಂಡಗಳಿಗೆ ಐಜಿಪಿ ಬೋರಲಿಂಗಯ್ಯ ನೀಡಿದ್ದಾರೆ.