ಭಾರತೀಯರು ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಈ ಪಂಚಭೂತಗಳನ್ನು ಅನಾದಿಕಾಲದಿಂದ ಪೂಜಿಸುತ್ತ ಬಂದಿದ್ದಾರೆ. ಅದಕ್ಕೆ ಕಾರಣ ಇವುಗಳ ಅಸ್ತಿತ್ವ ಇಲ್ಲದೇ ಮನುಷ್ಯ ಜೀವನ ಮಾತ್ರವಲ್ಲ, ಸೃಷ್ಟಿಯೇ ಇಲ್ಲ. ಹಾಗಾಗಿ ಪಂಚಭೂತಗಳನ್ನು ದೈವವೆಂದು ತಿಳಿದಿದ್ದಾರೆ. ಅಂತಹ ದೈವವನ್ನು ಮಲಿನ ಮಾಡಬಾರದು. ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯದಿಂದ, ಆಕಾಶವನ್ನು ಮಲಿನಮಾಡಿದ್ದರಿಂದ ಮನುಷ್ಯ, ಪ್ರಕೃತಿಯ ನಾಶವೂ ಆಗುತ್ತದೆ. ಇವುಗಳು ಸದಾ ಪೂಜ್ಯ.
ಗಂಗಾಷ್ಟಮೀ ಕೂಡ ಇಂತಹ ಒಂದು ಶುಭ ಕಾಲ. ಅಕ್ಟೋಬರ್ ೨೪ ರಂದು ಗಂಗಾಷ್ಟಮಿಯ ದಿನ. ಆಶ್ವಯುಜ ಮಾಸ ಶುಕ್ಲಪಕ್ಷದ ಅಷ್ಟಮಿಯಂದು ಗಂಗಾಷ್ಟಮೀ.
ಕೃತಯುಗದಲ್ಲಿ ಸಗರನು ಇಂದ್ರನಾಗುವ ಉದ್ದೇಶದಿಂದ ನೂರನೇ ಅಶ್ವಮೇಧಯಾಗವನ್ನು ಮಾಡುವ ಸಂದರ್ಭದಲ್ಲಿ ಇಂದ್ರನು ಅಶ್ವಮೇಧದ ಕುದುರೆಯನ್ನು ಅಪಹರಿಸಿ ಪಾತಾಳಲೋಕಕ್ಕೆ ಒಯ್ದು, ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿ ಬಳಿ ಇರಿಸಿದನು.
ರಾಜ್ಯದಲ್ಲಿ ಕುದುರೆಯನ್ನು ಕಾಣದೇ ಸಗರನ್ನು ತನ್ನ ಅರವತ್ತು ಸಾವಿರ ಮಕ್ಕಳ ಬಳಿ ಎಲ್ಲಿದ್ದರೂ ಹುಡುಕಿ ಕುದುರೆಯನ್ನು ಕರೆದು ತನ್ನಿ ಎಂದನು. ಅವರ ಇಡೀ ಭೂಮಂಡಲವನ್ನು ಹುಡುಕಿದರು. ಎಲ್ಲಿಯೂ ಕುದುರೆ ಕಾಣದೇ ಅನಂತರ ಪಾತಳವನ್ನು ಭೇದಿಸಿದರು. ಅಲ್ಲಿ ಕರೆಯನ್ನು ಕಂಡರು. ಕಪಿಲ ಮಹರ್ಷಿಯೇ ಇದನ್ನು ಅಪಹರಿಸಿದ್ದೆಂದು ತಿಳಿದು ಅವರನ್ನು ಸಾಯಿಸಲು ಹೋದರು. ಅವರ ಹುಂಕಾರಕ್ಕೆ ಅರವತ್ತು ಸಾವಿರ ಜನರೂ ಭಸ್ಮವಾದರು.
ತುಂಬ ದಿನವಾದರೂ ಬರದ ಮಕ್ಕಳನ್ನು ಕಂಡು ಅಂಶುಮಾನನ್ನು ಸಗರನು ಕಳುಹಿಸಿದನು. ಕುದುರೆಯು ಅವನಿಗೆ ಸಿಕ್ಕಿತು. ಆದರೆ ಗರುಡನು ಅವನಿಗೆ ಗಂಗೆಯನ್ನು ದಿವಿಯಿಂದ ಕರೆತಂದು ಈ ಎಲ್ಲರಿಗೂ ಮೋಕ್ಷವನ್ನು ಕರುಣಿಸು ಎಂದನು. ಅದೇ ಪ್ರಕಾರವಾಗಿ ಅಂಶುಮಾನ್ ತಪಸ್ಸನ್ನು ಮಾಡಿದನು. ಅನಂತರ ಅವನ ಮಗ ದಿಲೀಪ, ಅನಂತರ ಭಗೀರಥನು ಬ್ರಹ್ಮನ ಕುರಿತು ತಪಸ್ಸನ್ನು ಮಾಡಿದನು. ಬ್ರಹ್ಮನಿಂದ ವರ ಪಡೆದ ಭಗೀರಥನು ಗಂಗೆಯನ್ನು ಭೂಮಿಗೆ ಬಿಡುವಾಗ ಆಕೆಯ ರಭಸವನ್ನು ತಡೆಯುವ ಶಕ್ತಿ ಯಾರಿಗಿದೆ ಎಂದಾಗ ಶಿವನ ಕುರಿತು ತಪಸ್ಸನ್ನು ಮಾಡಿದನು. ಅದರ ಫಲವಾಗಿ ಭೂಮಿಗೆ ಬರುವ ಗಂಗೆಯನ್ನು ಶಿವನು ತನ್ನ ಶಿರದಲ್ಲಿ ಧರಿಸಿ, ಭೂಮಿಗೆ ಬಿಟ್ಟನು. ಆಕೆ ಭೂಮಿಯನ್ನು ಸ್ಪರ್ಶಿಸಿದ ದಿನವೇ ಗಂಗಾಷ್ಟಮೀ.
ಅನಂತರ ಆಕೆ ಏಳು ಕವಲಾಗಿ ಹೊಡದು ಬೇರೆ ಬೇರೆ ದಿಕ್ಕುಗಳಿಗೆ ಹೋಗುತ್ತಾಳೆ. ಅಲಕಾನಂದ ಎನ್ನುವ ಕವಲು ಭಗೀರಥನ ಹಿಂದೆ ಹೋಗಿ ಸತ್ತ ಎಲ್ಲರನ್ನೂ ಉದ್ಧರಿಸಿದಳು.
ಆ ದಿನದಂದು ಗಂಗೆಯನ್ನು ಪೂಜಿಸುವುದು ಅಥವಾ ಬಳಸುವ ಕೆರೆ, ಬಾಯಿಯಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವು ಅನೇಕ ವರ್ಷಗಳಿಂದ ಬಂದಿದೆ. ಎಲ್ಲ ನೀರುಗಳೂ ಗಂಗೆಗೆ ಸಮಾನವಾದ ನೀರೆಂದು ಭಾವಿಸಬೇಕು. ಆಕೆಯಿಂದಲೇ ಕುಡಿಯುವ ಬಳಸುವ ನೀರನ ಮೂಲ ಎಂಬ ಭಾವವಿದೆ. ಒಂದು ಕಲಶದಲ್ಲಿ ನೀರನ್ನು ತಂದು ಗಂಗೆಯನ್ನು ಆವಾಹಿಸುವ ಕ್ರಮವೂ ಇದೆ.