ನವದೆಹಲಿ, ನವೆಂಬರ್ 24: ಭಾರತ ಆಹಾರ ವಸ್ತುಗಳಲ್ಲಿ ಬಹುತೇಕ ಸ್ವಾವಲಂಬನೆ ಸಾಧಿಸಿದೆ. ಆಹಾರಧಾನ್ಯಗಳ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಭಾರತವೂ ಇದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ 330 ಮಿಲಿಯನ್ ಟನ್ಗಳಷ್ಟು ಆಹಾರಧಾನ್ಯಗಳನ್ನು ತಯಾರಿಸಲಾಗುತ್ತದೆ. ಅಂದರೆ 33,000 ಕೋಟಿ ಕಿಲೋಗ್ರಾಮ್ನಷ್ಟು ಆಹಾರಧಾನ್ಯಗಳು ಪ್ರತೀ ವರ್ಷ ಭಾರತದಲ್ಲಿ ತಯಾರಾಗುತ್ತವೆ.
ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಚೀನಾ ಬಿಟ್ಟರೆ ಭಾರತವೇ ನಂಬರ್ ಒನ್. ಜಾಗತಿಕ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಚೀನಾ ಪಾಲು ಶೇ. 17ರಷ್ಟು ಇದ್ದರೆ ಭಾರತದ ಪಾಲು ಶೇ. 14 ಇದೆ. ಐರೋಪ್ಯ ಒಕ್ಕೂಟದಲ್ಲಿರುವ ಎಲ್ಲಾ ದೇಶಗಳನ್ನು ಸೇರಿಸಿದರೆ ಶೇ. 17ರಷ್ಟು ಆಹಾರಧಾನ್ಯಗಳನ್ನು ಮಾತ್ರವೇ ಬೆಳೆಯಲಾಗುತ್ತದೆ. ರಷ್ಯಾ, ಅಮೆರಿಕ, ಇಂಡೋನೇಷ್ಯಾ, ಬಾಂಗ್ಲಾದೇಶ, ಬ್ರೆಜಿಲ್, ಅರ್ಜೆಂಟೀನಾ ಮೊದಲಾದವು ಪ್ರಮುಖ ಆಹಾರಧಾನ್ಯ ಉತ್ಪಾದಿಸುವ ದೇಶಗಳಾಗಿವೆ.
ಆಹಾರಧಾನ್ಯಗಳ ರಫ್ತು ವಿಚಾರಕ್ಕೆ ಬಂದರೆ ಚೀನಾ ಮತ್ತು ಭಾರತ ತುಸು ಹಿಂದುಳಿದಿವೆ. ಇತ್ತೀಚೆಗೆ ಭಾರತದ ಆಹಾರಧಾನ್ಯ ರಫ್ತು ಹೆಚ್ಚುತ್ತಿರುವುದು ಗಮನಾರ್ಹ. ಸಚಿವ ಚೌಹಾಣ್ ಪ್ರಕಾರ ಭಾರತದಲ್ಲಿ ಆಹಾರಧಾನ್ಯಗಳ ರಫ್ತಿನಿಂದ ಒಂದು ವರ್ಷದಲ್ಲಿ 50 ಬಿಲಿಯನ್ ಡಾಲರ್ ಆದಾಯ ಸಿಗುತ್ತಿದೆಯಂತೆ.