ಇರಾನ್ ಮತ್ತು ಅಮೇರಿಕಾ ಯುದ್ದದಿಂದಾಗಿ ದೇಶದಲ್ಲಿ ಉಂಟಾಗಿರುವ ಗ್ಯಾಸ್ ವ್ಯತ್ಯಯ ಬಿಸಿ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ್ದು, ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಮಾರ್ಚ್ 11ರ ಬುಧವಾರದಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ.

ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಭಕ್ತರಿಗೆ ವಿವಿಧ ಬಗೆಯ ಬಿಸಿ ಉಪಹಾರವನ್ನು ನೀಡಲಾಗುತ್ತಿತ್ತು. ಆದರೆ, ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚು ಅನಿಲ ಬಳಕೆಯಾಗುವ ತಿಂಡಿಗಳ ಬದಲಾಗಿ, ಇಂದಿನಿಂದ ಭಕ್ತರಿಗೆ ಅವಲಕ್ಕಿ ಮತ್ತು ಮೊಸರನ್ನು ವಿತರಿಸಲಾಗುತ್ತಿದೆ. ಅನಿಲ ಉಳಿತಾಯಕ್ಕಾಗಿ ದೇವಸ್ಥಾನ ಈ ಅನಿವಾರ್ಯ ಕ್ರಮ ಕೈಗೊಂಡಿದೆ.
ದೇಗುಲದಲ್ಲಿ ಸದ್ಯಕ್ಕೆ ಕೇವಲ ಮುಂದಿನ ಮೂರು ದಿನಗಳಿಗೆ ಆಗುವಷ್ಟು ಮಾತ್ರ ಅನಿಲ ದಾಸ್ತಾನು ಲಭ್ಯವಿದೆ.
ಅಷ್ಟರೊಳಗೆ ಪೂರೈಕೆ ಸಹಜ ಸ್ಥಿತಿಗೆ ಬಾರದಿದ್ದಲ್ಲಿ ಭಕ್ತರಿಗೆ ನೀಡಲಾಗುವ ಮಧ್ಯಾಹ್ನದ ಭೋಜನ ಪ್ರಸಾದದ ಮೇಲೂ ಇದು ಪರಿಣಾಮ ಬೀರಲಿದೆ. ಈಗಾಗಲೇ ಅನಿಲ ಪೂರೈಕೆ ಸಂಸ್ಥೆಗೆ ದಿನಕ್ಕೆ ಕನಿಷ್ಠ 20 ಸಿಲಿಂಡರ್‌ಗಳನ್ನು ಒದಗಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ತುರ್ತು ಪತ್ರ ಬರೆದಿದೆ.
ಮಧ್ಯಾಹ್ನದ ಭೋಜನಕ್ಕೂ ಸಂಕಷ್ಟ?: ಒಂದು ವೇಳೆ ಗ್ಯಾಸ್ ಪೂರೈಕೆ ಪುನರಾರಂಭಗೊಳ್ಳದಿದ್ದರೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಭಕ್ತರಿಗೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.




