ಮಹೋಬಾ (ಉತ್ತರ ಪ್ರದೇಶ): ನಂಬಿ ಕೆಲಸಕ್ಕೆ ಇಟ್ಟುಕೊಂಡವರೇ ಮನೆಯ ಮಾಲೀಕನನ್ನು ಮೂಲೆ ಗುಂಪಾಗಿಸಿ, ಸರಿಯಾಗಿ ಆಹಾರ ನೀಡದೆ ಕೊಂದ ಘಟನೆಯೊಂದು ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ.

ಓಂಪ್ರಕಾಶ್ ಸಿಂಗ್ ರಾಥೋಡ್ (70) ಮೃತಪಟ್ಟ ದುರ್ದೈವಿ. ರೈಲ್ವೆ ಇಲಾಖೆಯ ನಿವೃತ್ತ ಹಿರಿಯ ಕ್ಲರ್ಕ್ ಆದ ಇವರನ್ನು ಮತ್ತು ಅವರ ಬುದ್ದಿಮಾಂದ್ಯ ಮಗಳನ್ನು ಐದು ವರ್ಷಗಳ ಕಾಲ ಮನೆಯಲ್ಲೇ ಕೂಡಿ ಹಾಕಿ, ಸರಿಯಾಗಿ ಆಹಾರ ನೀಡದೆ ಚಿತ್ರಹಿಂಸೆ ನೀಡಿದ ಪರಿಣಾಮವಾಗಿ ಓಂಪ್ರಕಾಶ್ ಸಾವನ್ನಪ್ಪಿದ್ದಾರೆ.
2016ರಲ್ಲಿ ಪತ್ನಿ ನಿಧನರಾದ ನಂತರ, ಓಂಪ್ರಕಾಶ್ ತಮ್ಮ 27 ವರ್ಷದ ಬುದ್ದಿಮಾಂದ್ಯ ಮಗಳು ರಶ್ಮಿಯೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ತಂದೆ-ಮಗಳ ಆರೈಕೆಗಾಗಿ ರಾಮ್ ಪ್ರಕಾಶ್ ಕುಶ್ವಾಹ ಮತ್ತು ಆತನ ಪತ್ನಿ ರಾಮದೇವಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ, ಈ ದಂಪತಿ ಇಡೀ ಮನೆಯನ್ನು ತಮ್ಮ ವಶಕ್ಕೆ ಪಡೆದು, ಇವರನ್ನು ಮನೆಯ ಕೆಳಮಹಡಿಯ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ತಾವೇ ಮಾಲೀಕರಂತೆ ಮೇಲ್ಮಹಡಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು.
ಓಂಪ್ರಕಾಶ್ ಅವರ ಸಹೋದರ ಅಮರ್ ಸಿಂಗ್ ಹೇಳುವಂತೆ, “ಯಾರಾದರೂ ಸಂಬಂಧಿಕರು ಮನೆಗೆ ಭೇಟಿ ನೀಡಿದರೆ, ಓಂಪ್ರಕಾಶ್ ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ನೆಪ ಹೇಳಿ ಕೆಲಸಗಾರರು ಅವರನ್ನು ವಾಪಸ್ ಕಳುಹಿಸುತ್ತಿದ್ದರು.” ಸೋಮವಾರ ಓಂಪ್ರಕಾಶ್ ನಿಧನರಾದ ಸುದ್ದಿ ತಿಳಿದು ಸಂಬಂಧಿಕರು ಮನೆಗೆ ಬಂದಾಗ ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಓಂಪ್ರಕಾಶ್ ಅವರ ದೇಹ ಪೂರ್ತಿ ಸೊರಗಿ ಅಸ್ಥಿಪಂಜರದಂತಾಗಿತ್ತು. ಇತ್ತ ಅವರ ಮಗಳು ರಶ್ಮಿ ಕೂಡ ಕತ್ತಲೆ ಕೋಣೆಯಲ್ಲಿ ಅರೆಬರೆ ಬಟ್ಟೆಯಲ್ಲಿ, ಹಸಿವಿನಿಂದಾಗಿ 80 ವರ್ಷದ ವೃದ್ಧೆಯಂತೆ ಕಾಣುತ್ತಿದ್ದರು.
ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಸೂಟ್-ಟೈ ಧರಿಸಿ ಗೌರವಯುತ ಜೀವನ ನಡೆಸುತ್ತಿದ್ದ ವ್ಯಕ್ತಿ ಇಂದು ಹಸಿವಿನಿಂದ ಪ್ರಾಣ ಕಳೆದುಕೊಂಡಿರುವುದನ್ನು ಕಂಡು ನೆರೆಹೊರೆಯವರು ಕಣ್ಣೀರು ಹಾಕಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಪರೀಕ್ಷೆಗೆ ಕಳುಹಿಸಿದ್ದು, ಆರೋಪಿ ದಂಪತಿಗೆ ಕಠಿಣ ಶಿಕ್ಷೆ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.




