ಕಾರ್ಕಳ ಪರಶುರಾಮನ ಮೂರ್ತಿ ಕಂಚು, ಫೈಬರಿನದ್ದಲ್ಲ.. ಹಿತ್ತಾಳೆಯದ್ದು..! ಕೋರ್ಟ್‌ಗೆ ಪೊಲೀಸರ ಚಾರ್ಜ್‌ಶೀಟ್

Share with

ಉಡುಪಿ: ಬಹು ಚರ್ಚಿತ ಕಾರ್ಕಳ ಬೈಲೂರಿನ ಪರಶುರಾಮ ಮೂರ್ತಿ ಕಂಚಿನದ್ದಲ್ಲ, ಹಿತ್ತಾಳೆಯದ್ದು ಎಂದು ಪೊಲೀಸ್ ಮತ್ತು ತಜ್ಞರ ತನಿಖೆಯಲ್ಲಿ ಧೃಡಪಟ್ಟಿದೆ. ಈ ಮೂಲಕ ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಳೆ ಆರೋಪಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಹೊಸ ಚರ್ಚೆ ಶುರುವಾಗಿದೆ.

ಕಾರ್ಕಳ ನಗರಠಾಣಾ ಪೊಲೀಸರು ತನಿಖೆ ನಡೆಸಿ, ತಜ್ಞರು ನೀಡಿದ ವರದಿಯಾಧಾರದಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಪರಶುರಾಮ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ. ಕಂಚಿನ ಮೂರ್ತಿಯಲ್ಲ ಎಂದು ತನಿಖಾ ವರದಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. 2023ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರಶುರಾಮ ಥೀಂ ಪಾರ್ಕನ್ನು ಉದ್ಘಾಟನೆ ಮಾಡಿದ್ದರು. ಶಾಸಕ ಮಾಜಿ ಸಚಿವ ಸುನಿಲ್ ಕುಮಾರ್ ಚುನಾವಣೆಯ ಉದ್ದೇಶದಿಂದ ತರಾತುರಿಯಲ್ಲಿ ಮೂರ್ತಿಯನ್ನು ಉದ್ಘಾಟನೆ ಮಾಡಿಸಿದರು ಎಂಬುದು ಆರೋಪ. 

ರಟ್ಟು, ಫೈಬರ್, ಪ್ಲಾಸ್ಟಿಕ್ ಎಂದು ಕಾಂಗ್ರೆಸ್ ವಾದ ಮಾಡುತ್ತಿತ್ತು. ಮೂರ್ತಿ ಕಂಚಿನದ್ದೇ ಎಂದು ಬಿಜೆಪಿ ವಾದಿಸುತ್ತಿತ್ತು. ತಜ್ಞರ ಪರಿಶೀಲನೆ ಮತ್ತು ಪೊಲೀಸ್ ತನಿಖೆಯಿಂದ ಈಗ ಹಿತ್ತಾಳೆ ಎಂದು ಸಾಬೀತಾಗಿದೆ. ಶಿಲ್ಪಿ ಕೃಷ್ಣ ನಾಯಕ್ ಅವರ ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್‌ನಲ್ಲಿ ನಿರ್ಮಿಸಿದ್ದ ಮೂರ್ತಿಯಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರ ಥೀಂ ಪಾರ್ಕ್ ಯೋಜನೆ ಮತ್ತು ಕಾಮಗಾರಿ ನಡೆಸಿತ್ತು.

2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ಪೊಲೀಸರಿಂದ 1,231 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿವಾದ ಚರ್ಚೆಯ ನಡುವೆ ಅರ್ಧ ಮೂರ್ತಿ ತೆರವು ಮಾಡಿ, ಅದನ್ನು ಶೆಡ್ ನಲ್ಲಿಟ್ಟು ಬೆಂಗಳೂರಿಗೆ ರವಾನೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಶಿಲ್ಪಿ ಕೃಷ್ಣನಾಯ್ಕ್, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ಒಳಸಂಚು, ನಂಬಿಕೆ ದ್ರೋಹ, ವಂಚನೆ- ಸಾಕ್ಷ್ಯ ನಾಶ ಮಾಡಿದ್ದು ದೃಢಪಟ್ಟಿದೆ. 


Share with

Leave a Reply

Your email address will not be published. Required fields are marked *