ತೆವಳುತ್ತಾ ಸಾಗಿದ ‘ದಿ ಕೇರಳ ಸ್ಟೋರಿ 2’ ಕಲೆಕ್ಷನ್; ವೀಕೆಂಡ್ನಲ್ಲೂ ಏರಿಕೆ ಇಲ್ಲ

Share with

ಭಾರಿ ವಿವಾದದ ಮೂಲಕ ಸುದ್ದಿ ಆಗಿದ್ದ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ದೊಡ್ಡ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಫೆಬ್ರವರಿ 27ರಂದು ಬಿಡುಗಡೆ ಆದ ಈ ಸಿನಿಮಾಗೆ ಹೇಳಿಕೊಳ್ಳುವಂತಹ ಓಪನಿಂಗ್ ಸಿಗಲಿಲ್ಲ. ಬಿಡುಗಡೆಯಾಗಿ 9 ದಿನಗಳು ಕಳೆದಿವೆ. ಮಾಡಿದ ವಿವಾದಕ್ಕೆ ಹೋಲಿಸಿದರೆ ಈವರೆಗೂ ಆಗಿರುವ ಕಲೆಕ್ಷನ್ ಕಡಿಮೆ. 9 ದಿನಗಳಲ್ಲಿ ಈ ಚಿತ್ರಕ್ಕೆ 30 ಕೋಟಿ ರೂಪಾಯಿ ಕಲೆಕ್ಷನ್ (The Kerala Story 2 Collection) ಆಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಕುಸಿಯುವ ಸೂಚನೆ ಸಿಕ್ಕಿದೆ.

2023ರಲ್ಲಿ ಬಂದಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಅದರ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2’ ಈಗ ರಿಲೀಸ್ ಆಗಿದೆ. ಈ ಚಿತ್ರಕ್ಕೆ ವಿಪುಲ್ ಅಮೃತ್ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಕಾಮ್ಯಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಆದಾಗ ವಿವಾದ ಶುರುವಾಗಿತ್ತು. ಚಿತ್ರದ ವಿರುದ್ಧ ಅನೇಕರು ಕೋರ್ಟ್ ಮೆಟ್ಟಿಲು ಏರಿದ್ದರು.

ಮೊದಲ ದಿನ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದರಿಂದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಅಂದು ಕೇವಲ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ 4.65 ಕೋಟಿ ರೂಪಾಯಿ ಆದಾಯ ಬಂತು. ಮೂರನೇ ದಿನ 4.74 ಕೋಟಿ ರೂಪಾಯಿ ಆಯಿತು. ಆದರೆ ಮೊದಲ ಸೋಮವಾರ ಬರುತ್ತಿದ್ದಂತೆಯೇ ಈ ಸಿನಿಮಾದ ಕಲೆಕ್ಷನ್ ಮತ್ತೆ ಕುಸಿಯುತು.

2ನೇ ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಿಲ್ಲ. 2ನೇ ಶನಿವಾರ ಅಂದಾಜು 3.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಷ್ಟೇ ಪ್ರಚಾರ ಸಿಕ್ಕಿದ್ದರೂ ಒಂದು ದಿನ ಕೂಡ ಈ ಸಿನಿಮಾದ ಕಲೆಕ್ಷನ್ 5 ಕೋಟಿ ರೂಪಾಯಿ ದಾಟಲು ಸಾಧ್ಯವಾಗಿಲ್ಲ. ತೆವಳುತ್ತಾ ಸಾಗುತ್ತಿರುವ ಈ ಸಿನಿಮಾಗೆ ಈವರೆಗೂ ಒಟ್ಟು 30 ಕೋಟಿ ರೂಪಾಯಿ ಆದಾಯ ಬಂದಿದೆ.

ಈ ಸಿನಿಮಾದಿಂದ ಕೇರಳದ ಪ್ರತಿಷ್ಠೆಗೆ ಧಕ್ಕೆ ಆಗಿದೆ ಎಂಬ ಕಾರಣಕ್ಕೆ ಶೀರ್ಷಿಕೆಯನ್ನು ವಿರೋಧಿಸಲಾಗಿದೆ. ಕೇರಳದಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕಾಗಿ ಜನರು ಕಾದಿದ್ದಾರೆ. ‘ಧುರಂಧರ್ 2’ ಬಿಡುಗಡೆ ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾ ಹೇಳ ಹೆಸರಿಲ್ಲದಂತೆ ಅಖಾಡದಿಂದ ಹೊರಬೀಳುವುದು ಖಚಿತ.


Share with

Leave a Reply

Your email address will not be published. Required fields are marked *