ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು, ಊರವರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ.
ಸುಮಾರು 60 ವರ್ಷಗಳ ಹಿಂದಿನ ಶೋಚನೀಯವಸ್ಥೆಗೆ ತಲುಪಿ ಅತಂಕದಲ್ಲೇ ಕಟ್ಟಡದಲ್ಲಿ ಹಲವು ವರ್ಷಗಳ ಕಾಲ ಕುಟುಂಬ ಕ್ಷೇಮ ಕೇಂದ್ರ ಕಾರ್ಯವೆಸಗುತ್ತಿತ್ತು. ಊರವರ ಹಾಗೂ ವಾರ್ಡ್ ಸದಸ್ಯರ ನಿರಂತರ ಒತ್ತಾಯದ ಫಲವಾಗಿ ನೂತನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಸುಮಾರು 20ಲಕ್ಷ ರೂ ಮಂಜೂರುಗೊಂಡು ಕಾಮಗಾರಿ ಆರಂಭಿಸಿ ಮುಕ್ತಾಯದ ಹಂತಕ್ಕೆ ತಲುಪಿದೆ.
ಒಂದು ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗುವುದೆಂದು ಗುತ್ತಿಗೆದಾರ ತಿಳಿಸಿದ್ದಾರೆ. ಇದೀಗ ಕುಟುಂಬ ಕ್ಷೇಮ ಕೇಂದ್ರ ಪರಿಸರದ ಶಾಲೆಯ ಕೊಠಡಿಯಲ್ಲಿ ಸೇವೆ ನಡೆಸಲಾಗುತ್ತಿದೆ. ಕಾಮಗಾರಿ ಶೀಘ್ರದಲ್ಲೇ ಪೂರ್ತಿಗೊಳಿಸಿ ನೂತನ ಕಟ್ಟಡದಲ್ಲಿ ಸೇವೆ ಆರಂಭಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.