
ಬಂಟ್ವಾಳ: ಕೋಳಿ ಗಲಾಟೆ ಮುಗಿಯಿತು ಇದೀಗ ತೆಂಗಿನ ಎಣ್ಣೆ ವಿಚಾರದಲ್ಲಿ ಗಲಾಟೆ, ಮೊನ್ನೆ ಮೊನ್ನೆ ಪ್ರಯಾಣಿಕನೋರ್ವ ಕೋಳಿ ಮಾಂಸ ಹಿಡಿದು ಬಸ್ ನಲ್ಲಿ ಪ್ರಯಾಣಿಸಿದ ಎನ್ನುವ ಕಾರಣಕ್ಕಾಗಿ ಚಾಲಕನು ಬಸ್ ಅನ್ನು ಠಾಣೆಗೆ ತೆಗೆದುಕೊಂಡು ಹೋದ ಪ್ರಕರಣದ ನೆನಪು ಮಾಸುವ ಮುನ್ನ ಬಿ.ಸಿ ರೋಡಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

ಮಂಗಳೂರು–ಹಾಸನ ಬಸ್ ನಲ್ಲಿ ಮಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಕೆಯೋರ್ವರು ಮೂರು ಕ್ಯಾನ್ ತೆಂಗಿನ ಎಣ್ಣೆಯನ್ನು ಹಿಡಿದುಕೊಂಡು ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದು, ಬಸ್ ನಿರ್ವಾಹಕ ಅವರನ್ನು ಇಳಿಸಿದ ಘಟನೆ ನಡೆದಿದೆ.
ಬಸ್ ಹತ್ತಿದ ಮಹಿಳೆಯ ಕೈಯಲ್ಲಿ ಚೀಲವೊಂದಿದ್ದು, ಅದರಲ್ಲಿ ಮೂರು ಕ್ಯಾನ್ ತೆಂಗಿನ ಎಣ್ಣೆ ಇತ್ತು. ಮಂಗಳೂರಿನಿಂದ ಸಂಬಂಧಿಕರ ಮನೆಗೆ ಪ್ರಯಾಣಿಸುವ ಮಹಿಳೆ ಶುಧ್ದ ತೆಂಗಿನ ಎಣ್ಣೆಯನ್ನು ಕೊಂಡು ಹೋಗುತ್ತಿದ್ದರು. ಆದರೆ ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ತೆಂಗಿನ ಎಣ್ಣೆಯನ್ನು ನೋಡಿ ಇದು ಏನಮ್ಮಾ ಅಂತ ಕೇಳಿದ್ದಾರೆ. ಮೇಲ್ನೋಟಕ್ಕೆ ತೆಂಗಿನ ಎಣ್ಣೆ ಎಂಬುದು ಖಾತ್ರಿಯಾದರೂ ಕಂಡಕ್ಟರ್ ಮಹಿಳೆಯನ್ನು ಪ್ರಶ್ನಿಸಿದಾಗ ಅವರು ಕೋಪದಲ್ಲಿ ಇದು ಬಾಂಬ್ ಅಂತ ಹೇಳಿದ್ದಾರೆ. ಆದರೆ ಯಾವುದೇ ಆಯಿಲ್ ಪದಾರ್ಥಗಳನ್ನು ಬಸ್ ನಲ್ಲಿ ಕೊಂಡು ಹೋಗುವಂತಿಲ್ಲ ಎಂದು ಮಹಿಳೆಯಲ್ಲಿ ನಿರ್ವಾಹಕ ವಾಗ್ವಾದ ನಡೆಸಿದ್ದಾನೆ. ಆದರೆ ಮಹಿಳೆ ಇವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಟ್ಟು ಬಿಡದ ಕಂಡೆಕ್ಟರ್ ಮಂಗಳೂರಿನಿಂದ ಬಿ.ಸಿ ರೋಡು ತಲುಪುತ್ತಿದ್ದಂತೆ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಇಳಿಸಿದ್ದಾರೆ.
ಆದರೆ ಮಹಿಳೆ ನನಗೆ ನ್ಯಾಯ ಬೇಕು ಅಂತ ಸಂಚಾರ ನಿರ್ವಾಹಣೆಗಾಗಿ ಬಿ.ಸಿ ರೋಡು ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ವಿವೇಕ್ ರೈ ಅವರಲ್ಲಿ ಮನವಿ ಮಾಡಿಕೊಂಡರು.
ಮಹಿಳೆ ಬಸ್ ನಿಂದ ಇಳಿದಿದ್ದಾರೆ ಆದರೂ ಎಣ್ಣೆ ಕ್ಯಾನ್ ಮಾತ್ರ ಬಸ್ ನೊಳಗೆ ಇತ್ತು. ಮಧ್ಯ ವಯಸ್ಸಿನ ಒಂಟಿ ಮಹಿಳೆಯಾಗಿರುವುದರಿಂದ ಬಸ್ ನಿಂದ ಇಳಿಸಿದ ಕಂಡಕ್ಟರ್ ನ ವರ್ತನೆ ಸರಿ ಕಾಣದೆ ಸಾರ್ವಜನಿಕರು ಕೂಡ ಜಮಾಯಿಸಿದ್ದರು.
ಮಹಿಳೆ ನೀಡಿದ ದೂರಿನಂತೆ ಟ್ರಾಫಿಕ್ ಪೋಲೀಸ್ ವಿವೇಕ್ ಅವರು ಬಸ್ ಚಾಲಕನಲ್ಲಿ ಬಸ್ ನ್ನು ಬದಿಗೆ ಸರಿಸಿ ಸ್ವಲ್ಪ ಕಾಲ ನಿಲ್ಲುವಂತೆ ಕೇಳಿಕೊಂಡರು. ಬಳಿಕ ಘಟನೆಯಿಂದ ಮಹಿಳೆಗೆ ತೊಂದರೆಯಾಗುತ್ತದೆ ಎಂಬುದನ್ನು ಕಂಡೆಕ್ಟರ್ ಅವರಿಗೆ ತಿಳಿಸಿದರು.
ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ.
ಅವರು ಫೋನ್ ಮೂಲಕ ನಿರ್ವಾಹಕನಿಗೆ ಬುದ್ಧಿ ಮಾತು ಹೇಳಿದ್ದಲ್ಲದೆ ಸಂತ್ರಸ್ತ ಮಹಿಳೆಯನ್ನು ಅದೇ ಬಸ್ ನಲ್ಲಿ ತೆಂಗಿನ ಎಣ್ಣೆ ಸಹಿತ ಹಾಸನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಕಾರಿ ಬಸ್ ನಲ್ಲಿ ಯಾವ ವಸ್ತುಗಳನ್ನು ಕೊಂಡು ಹೋಗಬಹುದು? ಯಾವುದನ್ನು ಕೊಂಡು ಹೋಗುವಂತಿಲ್ಲ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನ ಹೊರಗಡೆ ಅಥವಾ ಡಿಪೋಗಳಲ್ಲಿ ಜನರಿಗೆ ಮುಟ್ಟುವಂತೆ ಜಾಹೀರಾತುಗಳನ್ನು ಹಾಕಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.




