ಅನ್ಯ ಕೋಮಿನ ಕಾಂಗ್ರೆಸ್ ಬೆಂಬಲಿತರು ನಮ್ಮ ಕಾರ್ಯಕರ್ತರ ಮೇಲೆ ಪುಂಡಾಟಿಕೆ ಮಾಡಿದ್ದಾರೆ
ಚೂರಿ ಇರಿದವರ ಮೇಲೆ ಕಾನೂನು ಕ್ರಮ ಆಗಿಲ್ಲ
ಉಡುಪಿಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ
ಉಡುಪಿ: ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿದಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಅನ್ಯ ಕೋಮಿನ ಕಾಂಗ್ರೆಸ್ ಬೆಂಬಲಿತರು ನಮ್ಮ ಕಾರ್ಯಕರ್ತರ ಮೇಲೆ ಪುಂಡಾಟಿಕೆ ಮಾಡಿದ್ದಾರೆ. ಚೂರಿ ಇರಿತ ಮಾಡಿದವರ ಮೇಲೆ ಕಾನೂನು ಕ್ರಮ ಆಗಿಲ್ಲ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿದ ಘಟನೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಚುಕ್ಕಾಣಿ ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಂಭ್ರಮಾಚರಣೆ ನಡೆದಿದೆ. ಕರಾವಳಿ ಬಿಜೆಪಿಯ ಹಿಂದುತ್ವದ ಭದ್ರಕೋಟೆ. ಕರಾವಳಿಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ವಿಜಯೋತ್ಸವ ನಮ್ಮ ಹಕ್ಕು ಕಾಂಗ್ರೆಸ್ ಗೆ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಇಡೀ ಪೊಲೀಸ್ ವ್ಯವಸ್ಥೆ ಕಾಂಗ್ರೆಸ್ ಕಚೇರಿ ಒಳಗೆ ಕೆಲಸ ಮಾಡುತ್ತಿದೆ. ವಿಜಯೋತ್ಸವ ಮಾಡಿದವರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪೋಲಿಸ್ ಇಲಾಖೆ ಕಾಂಗ್ರೆಸ್ಸಿನ ಕಪಿಮುಷ್ಠಿಯಲ್ಲಿದೆ. ಗೃಹ ಇಲಾಖೆ ಗೃಹ ಸಚಿವರು ಪ್ರಕರಣದ ಮಧ್ಯಪ್ರವೇಶ ಮಾಡಬೇಕು. ಕಾರ್ಯಕರ್ತರು ಬಿಜೆಪಿಯ ಪ್ರಮುಖರು ಒಟ್ಟಾಗಿ ನ್ಯಾಯ ಕೊಡುವ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಕೆಲಸ ಮಾಡಿಸುತ್ತಿದೆ. ಪೊಲೀಸ್ ಅಧಿಕಾರಿಗಳು ಕರ್ತವ್ಯ ಸೇವೆ ಮಾಡಲು ಫ್ರೀಹ್ಯಾಂಡ್ ಇಲ್ಲ. ಕಾಂಗ್ರೆಸ್ ನಾಯಕರ ಪರ್ಮಿಷನ್ ತೆಗೆದುಕೊಂಡು ಪೊಲೀಸರು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಇಂತಹ ಕೃತ್ಯಗಳಿಂದ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ ಎಂದು ಹೇಳಿದರು.