
ಸಕಲೇಶಪುರ :- ಇತ್ತೀಚೆಗೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75 ರ ಬೈಪಾಸ್ ರಸ್ತೆಯಿಂದ ಕೌಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅವೈಜ್ಞಾನಿಕವಾಗಿ ಕೂಡಿದ್ದು ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ.
ಇತ್ತೀಚೆಗೆ ಹೊಸದಾಗಿ ನಿರ್ಮಿಸಿರುವ ಈ ರಸ್ತೆಯು ಮುಂಗಾರು ಪ್ರಾರಂಭದ ಮಳೆಗೆ ಕುಸಿಯುವ ಹಂತದಲ್ಲಿದೆ. ಇದರಿಂದ ಸಾರ್ವಜನಿಕರಿಗಾಗಲಿ ಪ್ರಯಾಣಿಕರಿಗಾಗಲಿ,ವಾಹನ ಚಾಲಕರಿಗಾಗಲಿ ಯಾವುದೇ ರೀತಿಯ ಅನುಕೂಲವಿಲ್ಲ. ಇಂತಹ ಕಾಮಗಾರಿಯನ್ನು ಮಾಡಿದವರ ವಿರುದ್ಧ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಮಾಡಬೇಕು, ಇಲ್ಲವಾದರೆ ಮುಂದಿನ ದಿನದಲ್ಲಿ ರಸ್ತೆ ತಡೆದು ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ. ಎಂದು ಆನೆಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಿಮ್ಮಯ್ಯ ಆರೋಪಿಸಿದ್ದಾರೆ.
ತಾಲ್ಲೂಕು ಕಸಬಾ ಹೋಬಳಿ ಆನೇಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಕೌಡಹಳ್ಳಿ ಗ್ರಾಮವು ಸಕಲೇಶಪುರ ಪಟ್ಟಣಕ್ಕೆ ಹೊಂದಿಕೊಂಡಂತೆ ಪ್ರೇಮನಗರ ಬಡಾವಣೆಯಿಂದ 500 ಮೀಟರ್‌ಗಳ ಅಂತರದಲ್ಲಿದ್ದು, ಸಕಲೇಶಪುರ ಪಟ್ಟಣದಿಂದ ಕೇವಲ 2 ಕಿ.ಮೀ ಅಂತರದಲ್ಲಿರುತ್ತದೆ. ಅಲ್ಲದೆ ಪ್ರೇಮನಗರ ಬಡಾವಣೆಯ ಮೂಲಕ ಕೌಡಹಳ್ಳಿ ಗ್ರಾಮದ ಸಂಪರ್ಕ ರಸ್ತೆಗೆ ಹೊಂದಿಕೊಂಡಂತೆ 450ಹೆಚ್ಚು ಕುಟುಂಬದವರು ವಾಸವಾಗಿದ್ದಾರೆ.
ಅಲ್ಲದೆ ಉಪ ಕಾರಗೃಹ, ಜೆ.ಎಸ್.ಎಸ್. ವಿದ್ಯಾಸಂಸ್ಥೆ, ರೋಟರಿ ಶ್ರವಣದೋಷ ಶಾಲೆ ಹಾಗೂ ಸರ್ಕಾರಿ ಶಾಲೆಗಳಿವೆ.ಇಂತಹ ಗ್ರಾಮಕ್ಕೆ ಅನುಕೂಲವಾಗುವ ರಸ್ತೆಯು ಈಗ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ್ದು ಸಾರ್ವಜನಿಕರಿಂದ ಆಕ್ರೋಶಕ್ಕೆ ಗುರಿಯಾಗಿದೆ.
ಕೂಡಲೆ ಈಗಲಾದರೂ ಸಂಬಂಧ ಪಟ್ಟು ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಯನ್ನು ಮಾಡಿಕೊಡಬೇಕಾಗಿ ಗ್ರಾಮಸ್ಥರು ವಿನಂತಿ ಮಾಡಿಕೊಂಡಿದ್ದಾರೆ.