ಸೇನೆಯಲ್ಲಿನ ಕೆಲಸವೆಂದರೆ ಹಾಗೆ, ಅದಕ್ಕೆ ಬಿಡುವು ಎಂಬುದು ಇರುವುದಿಲ್ಲ. ದಿನದ 24 ಗಂಟೆಯೂ ಎಚ್ಚರದಿಂದ ಇರಬೇಕು. ಅನೇಕರು ತಮ್ಮ ಕುಟುಂಬದಿಂದ ದೂರವಾಗಿ ಸೇನೆಗೆ ಸೇವೆ ಸಲ್ಲಿಸುತ್ತಿದ್ದಾರೆ. ರಜೆ ಸಿಕ್ಕಾಗಲೆಲ್ಲ ಮನೆಗೆ ಬಂದು ತಂದೆ-ತಾಯಿ, ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಅತ್ತ ಅನೇಕ ಪೋಷಕರು ಗಡಿ ಭದ್ರತೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಾ ತಮ್ಮ ಊರಿನಲ್ಲಿಯೇ ಇರುತ್ತಾರೆ. ತಮ್ಮ ಮಕ್ಕಳು ಅನಿರೀಕ್ಷಿತವಾಗಿ ಭೇಟಿಯಾದಾಗ ಆಗುವ ಆನಂದ ವರ್ಣನಾತೀತ.
ಕೆಲವು ಸೈನಿಕರು ತಮ್ಮ ಪೋಷಕರಿಗೆ ಅಂತಹ ಸರ್ಪ್ರೈಶ್ ನೀಡುತ್ತಾರೆ.ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹದೊಂದು ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಒಬ್ಬ ಮಹಿಳೆ ತೆಂಗಿನಕಾಯಿ ಮಾರುತ್ತಿರುತ್ತಾಳೆ. ಅಷ್ಟರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಎಳನೀರುವ ಕೊಡಿ ಬಗ್ಗೆ ಕೇಳಿದಾಗ, ಮಹಿಳೆ ಅದನ್ನು ಒಡೆಯಲು ಮುಂದಾಗುತ್ತಾಳೆ. ಅಷ್ಟರಲ್ಲಿ ಆತ ತನ್ನ ಮಾಸ್ಕ್ ತೆಗೆದಾಗ ಮಹಿಳೆ ಭಾವುಕಳಾಗುತ್ತಾಳೆ. ಇಲ್ಲಿ ಬಂದಿರುವುದು ಎಳನೀರು ಮಾರುವವಳ ಮಗ, ಆತ ಸೈನಿಕ.
ಈ ವಿಡಿಯೋವನ್ನು ಫೇಸ್ಬುಕ್, ಎಕ್ಸ್ನಲ್ಲಿ ಅನೇಕರು ಹಂಚಿಕೊಂಡಿದ್ದು, ‘‘ರೈಲ್ವೆ ಸ್ಟೇಷನ್ ಬಳಿ ಎಳನೀರು ಮಾರುವ ಈ ಮಹಾತಾಯಿಯ ಮಗ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ರಜೆ ಮೇಲೆ ತನ್ನ ತಾಯಿಗೆ ಅರಿವಿಲ್ಲದಂತೆ ಬಳಿ ಬಂದು ಭೇಟಿಯಾದ ಕ್ಷಣ. ತಾಯಿ-ಮಗನ ಭಾವನಾತ್ಮಕ ದೃಶ್ಯ ನೋಡಿ ಕಣ್ಣಲ್ಲಿ ನೀರು ಸುರಿಯಿತು’’ ಎಂದು ಬರೆದುಕೊಂಡಿದ್ದಾರೆ.