ಉಡುಪಿ: ಮೂರು ವರ್ಷಗಳ ಕಾಲ ಗಲ್ಫ್‌ನಲ್ಲಿ ಕೆಲಸ ಮಾಡಿ ಊರಿಗೆ ಮರಳಿದ ಯುವಕನೊಬ್ಬ ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ತಾಯಿಗೆ ಅಚ್ಚರಿ ಮೂಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಕಾಲ ದುಬಾಯಿನಲ್ಲಿ ಕೆಲಸ ಮಾಡಿ ಊರಿಗೆ ಮರಳಿದ್ದರು. ತನ್ನ ಆಗಮನವನ್ನು ನೋಡಿ ಅಚ್ಚರಿ ಪಡಬೇಕೆನ್ನುವ ಉದ್ದೇಶದಿಂದ ಅವನು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ವಿಷಯವನ್ನು ತಿಳಿಸಲಿಲ್ಲ.
ಅವನು ಮನೆಗೆ ಹಿಂದಿರುಗಿದಾಗ ಅವನ ತಾಯಿ ತನ್ನ ಮೀನು ಮಾರಾಟದ ಕೆಲಸಕ್ಕಾಗಿ ಹೋಗಿದ್ದರಿಂದ, ರೋಹಿತ್ ಕೂಡ ಗಂಗೊಳ್ಳಿಯ ಮೀನುಗಾರಿಕಾ ಬಂದರು ಮಾರುಕಟ್ಟೆಗೆ ತೆರಳಿದ್ದು, ತನ್ನ ಗುರುತನ್ನು ಮರೆಮಾಚಲು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಹೋಗಿ ತನ್ನ ತಾಯಿಯ ಬಳಿ ಮೀನು ಕೇಳಿದ್ದಾನೆ.
ಅವನು ಚೌಕಾಸಿ ಮಾಡಲು ಪ್ರಯತ್ನಿಸುತ್ತಿದ್ದಂತೆ, ಅವನ ತಾಯಿ ಸುಮಿತ್ರ ಅವರು ಅವನ ಧ್ವನಿಯನ್ನು ಗುರುತಿಸಿ, ಎದ್ದು ಅವನನ್ನು ಅಪ್ಪಿಕೊಂಡು ಸಂತೋಷದ ಕಣ್ಣೀರನ್ನು ಸುರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗನ ಮೇಲಿನ ತಾಯಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ.