ಮಂಗಳೂರು–ಬೆಂಗಳೂರು ವಂದೇ ಭಾರತ್ ಗೆ ವೇದಿಕೆ ಸಿದ್ಧ

Share with

ಮಂಗಳೂರು: ಭಾರತೀಯ ರೈಲ್ವೇಯು ಅತೀ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಭಾಗದ ರೈಲು ಮಾರ್ಗದ ವಿದ್ಯುದೀಕರಣ ಕೆಲಸವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಶೀಘ್ರ ಆರಂಭಿಸುವುದು ಸಾಧ್ಯವಾಗಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಭಾಗದ ರೈಲು ವಿದ್ಯುದೀಕರಣ ಮುಗಿದಿದ್ದು, ಡಿ. 28ರಂದು ವಿದ್ಯುತ್ ಚಾಲಿತ ರೈಲು ಸಂಚರಿಸಿರುವುದು ಅತೀ ದೊಡ್ಡ ಯಶಸ್ಸು. ಇದರಿಂದ ಬೆಂಗಳೂರು-ಮಂಗಳೂರು ಇಡೀ ಭಾಗ ವಿದ್ಯುದೀಕರಣಗೊಂಡಂತಾಗಿದೆ. ಹಾಗಾಗಿ ನಾವು ಈ ವಿಭಾಗದಲ್ಲಿ ವಿದ್ಯುತ್ ಚಾಲಿತ ರೈಲು ಆರಂಭಿಸುವುದಕ್ಕೆ ಪೂರ್ಣವಾಗಿ ಸಜ್ಜಾಗಿದ್ದೇವೆ. ವಂದೇಭಾರತ್ ರೈಲು ಸಹಿತ ಇತರ ವೇಗದ ಎಲೆಕ್ಟಿಕ್ ರೈಲುಗಳನ್ನು ಆರಂಭಿಸುವ ಮೂಲಕ ಈ ಮಾರ್ಗದಲ್ಲಿ ತ್ವರಿತ, ಸ್ವಚ್ಛ ಪರಿಸರ ಸ್ನೇಹಿ ರೈಲು ಸಂಚಾರವನ್ನು ಆರಂಭಿಸಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಮಧ್ಯೆ 55 ಕಿ.ಮೀ ಘಾಟಿ ಭಾಗ ವಿದ್ಯುದೀಕರಣಗೊಂಡಿದೆ. ಈ ಮಾರ್ಗವು ಅತ್ಯಂತ ಸವಾಲಿನದ್ದಾಗಿದ್ದು, ರೈಲು ಹಳಿಗೆ ರಸ್ತೆ ಸಂಪರ್ಕವೂ ಇಲ್ಲದೆ ಕಾಮಗಾರಿ ಜಟಿಲವಾಗಿತ್ತು. ಕಡಿದಾದ ಮಾರ್ಗ, 57 ಸುರಂಗ, 226 ಸೇತುವೆ, 108 ತಿರುವುಗಳಿಂದ ಕೂಡಿರುವ ರೈಲ್ವೇ ಮಾರ್ಗದ ಹಲವು ಭಾಗ ಭೂಕುಸಿತವಾಗುವಂಥ ಪ್ರದೇಶವೂ ಆಗಿವೆ.

2023ರ ಡಿಸೆಂಬರ್ ನಲ್ಲಿ ವಿದ್ಯುದೀಕರಣ ಕಾಮಗಾರಿ ಆರಂಭವಾಗಿದ್ದು, ಐದು ಸ್ವಿಚಿಂಗ್ ಸ್ಟೇಷನ್ ಗಳು, ಪೂರ್ಣವಾಗಿ ಓವರ್ ಹೆಡ್ ಇಲೆಕ್ಟಿಫಿಕೇಶನ್ ನಡೆಸಲಾಗಿದೆ. ಸುರಕ್ಷೆಗಾಗಿ ಪ್ರತೀ ಟ್ರಾಕ್ಷನ್ ಕಂಬಗಳ ನಡುವಿನ ಗರಿಷ್ಠ ಅಂತರವನ್ನು 67.5 ಮೀ.ಗೆ ನಿಗದಿಪಡಿಸಲಾಗಿದೆ.

ಬೆಂಗಳೂರು-ಮಂಗಳೂರು ಸಂಬಂಧಕ್ಕೆ ಬಲ

ಮಂಗಳೂರು-ಬೆಂಗಳೂರು ಭಾಗವು ಪೂರ್ಣವಾಗಿ ವಿದ್ಯುದೀಕರಣಗೊಂಡ ಕಾರಣ ಡೀಸೆಲ್ ಮೇಲೆ ಅವಲಂಬನೆ ಕಡಿಮೆಯಾಗಲಿದೆ. ಹೊಗೆ ಹೊರಸೂಸುವಿಕೆ ಇಳಿಕೆಯಾಗಿ, ಕಾರ್ಯನಿರ್ವಹಣೆ ಸುಗಮ-ತ್ವರಿತಗೊಳ್ಳಲಿದೆ. ವಂದೇಭಾರತ್ ನಂತಹ ಅತ್ಯಾಧುನಿಕ ಸೂಪರ್ ಫಾಸ್ಟ್ ರೈಲುಗಳ ಪರಿಚಯಿಸುವಿಕೆಗೂ ಇದು ನಾಂದಿಯಾಗಲಿದೆ. ಐಟಿ ನಗರಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ವಾಣಿಜ್ಯ ಹಾಗೂ ಆರ್ಥಿಕ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ, ಒಟ್ಟಾರೆ ಆರ್ಥಿಕ ಪ್ರಗತಿಗೆ ನಾಂದಿಯಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *