ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ಗೇರಿದರೂ ತೂಕ ಹೆಚ್ಚಾದ ಕಾರಣ ಅನರ್ಹಗೊಂಡು ಐತಿಹಾಸಿಕ ಪದಕ ತಪ್ಪಿಸಿಕೊಂಡಿದ್ದ ವಿನೇಶ್ ಫೋಗಾಟ್ (Vinesh Phogat) ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದ ಕೊನೆಯ ಸಾಲುಗಳು ಕುತೂಹಲ ಮೂಡಿಸಿವೆ.
ಆರಂಭದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ದಿನ್ಶಾ ಪರ್ದೀವಾಲಾ, ಡಾ.ವೇಯ್ನ ಪ್ಯಾಟ್ರಿಕ್ ಲೊಂಬಾರ್ಡ್, ಕೋಚ್ ಅಕೋಸ್‌ರನ್ನು ಮನತುಂಬಿ ವಿನೇಶ್ ಹೊಗಳಿದ್ದಾರೆ. ಕೊನೆಯಲ್ಲಿ “ಬೇರೆ ಯಾವುದೇ ಸಂದರ್ಭದಲ್ಲಾದರೂ ನಾನು 2032ರವರೆಗೆ ಸ್ಪರ್ಧಿಸುತ್ತಲೇ ಇರುವ ಬಗ್ಗೆ ಯೋಚಿಸುತ್ತಿದ್ದೆ. ಭವಿಷ್ಯದಲ್ಲಿ ನನಗೇನು ಕಾದಿದೆಯೋ ಗೊತ್ತಿಲ್ಲ. ಆದರೆ ನನ್ನ ಹೋರಾಟ ಮಾತ್ರ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ. ಈ ಸಾಲುಗಳು ಕುತೂಹಲ ಮೂಡಿಸಿವೆ. ಪ್ಯಾರಿಸ್ ನಲ್ಲಿ ಪದಕ ತಪ್ಪಿಸಿಕೊಂಡ ಮೇಲೆ ಅವರು ಭಾವುಕರಾಗಿ ಕುಸ್ತಿಗೆ ವಿದಾಯ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ವಿನೇಶ್ ಸಾಯುವ ಭೀತಿ ಉಂಟಾಗಿತ್ತು: ಕೋಚ್
ಒಲಿಂಪಿಕ್ಸ್ ನಲ್ಲಿ ತೂಕ ಕಡಿಮೆಗೊಳಿಸುವ ಯತ್ನದ ವೇಳೆ ವಿನೇಶ್ ಸಾಯಬಹುದು ಎಂಬ ಭೀತಿ ಉಂಟಾಗಿತ್ತು ಎಂದು ಕೋಚ್ ವಾಲ್ಲರ್ ಅಕೋಸ್ ಹೇಳಿದ್ದಾರೆ. ಕುಸ್ತಿ ಫೈನಲ್‌ಗೂ ಮುನ್ನ ವಿನೇಶ್ ತೂಕ ಇಳಿಸಲು ಐದೂವರೆ ಗಂಟೆ ಕಾಲ ನಡೆದ ಪ್ರಯತ್ನದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಸೆಮಿಫೈನಲ್ ಬಳಿಕ ವಿನೇಶ್ ತೂಕ 2.7 ಕೆಜಿ ಹೆಚ್ಚಾಗಿತ್ತು. ಆರಂಭದಲ್ಲಿ ಅವರಿಗೆ 1 ಗಂಟೆ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿಸಿದೆವು. ಮಧ್ಯರಾತ್ರಿಯಿಂದ ಬೆಳಗ್ಗೆ 5.30 ರವರೆಗೆ ಆಗಾಗ 2-3 ನಿಮಿಷ ಮಾತ್ರ ವಿನೇಶ್ ವಿಶ್ರಾಂತಿ ಪಡೆದರು. ಒಂದು ಹಂತದಲ್ಲಿ ಅವರು ಕುಸಿದು ಬಿದ್ದಿದ್ದರು ಎಂದು ಕೋಚ್ ಹೇಳಿದ್ದಾರೆ.