ಪ್ಯಾರಿಸ್ : ಒಲಿಂಪಿಕ್ಸ್ನಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ಭಾರತ ಹಾಕಿ ತಂಡ, ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಹರ್ಮನ್ಪ್ರೀತ್ ಸಿಂಗ್ ಪಡೆ ಆಗಸ್ಟ್ 6 ರಂದು ನಡೆಯಲ್ಲಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಜರ್ಮನಿಯನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಇಡೀ ತಂಡ ಸಕಲ ತಯಾರಿಯಲ್ಲಿ ತೊಡಗಿದೆ. ಆದರೆ, ಈ ಬಿಗ್ ಮ್ಯಾಚ್ಗೂ ಮುನ್ನ ಭಾರತ ಹಾಕಿ ತಂಡಕ್ಕೆ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಬಿಗ್ ಶಾಕ್ ನೀಡಿದೆ. ತಂಡದ ಅತ್ಯಂತ ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಅವರನ್ನು ಸೆಮಿಫೈನಲ್ ಪಂದ್ಯದಿಂದ ನಿಷೇಧಿಸಿದೆ.
ಅಮಿತ್ಗೆ 1 ಪಂದ್ಯದಿಂದ ನಿಷೇಧ
ವಾಸ್ತವವಾಗಿ ಆಗಸ್ಟ್ 4 ರಂದು ನಡೆದ ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಡಿಫೆಂಡರ್ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದಿದ್ದರು. ಪಂದ್ಯದ ಸಮಯದಲ್ಲಿ, ಅವರ ಹಾಕಿ ಸ್ಟಿಕ್ ಗ್ರೇಟ್ ಬ್ರಿಟನ್ ತಂಡದ ಆಟಗಾರನ ಮುಖಕ್ಕೆ ಆಕಸ್ಮಿಕವಾಗಿ ಬಡಿದಿತ್ತು. ಇದರಿಂದಾಗಿ ಅವರಿಗೆ ಆನ್-ಫೀಲ್ಡ್ ರೆಫ್ರಿ, ರೆಡ್ ಕಾರ್ಡ್ ನೀಡಿದ್ದರು. ಹೀಗಾಗಿ ರೆಡ್ ಕಾರ್ಡ್ ಪಡೆದ ಅಮಿತ್ ರೋಹಿದಾಸ್ ಇಡೀ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇದರಿಂದ ಭಾರತ ತಂಡ 10 ಆಟಗಾರರೊಂದಿಗೆ ಇಡೀ ಪಂದ್ಯವನ್ನು ಆಡಬೇಕಾಯಿತು. ಇದೀಗ ರೋಹಿದಾಸ್ ಅವರನ್ನು ಸೆಮಿಫೈನಲ್ ಪಂದ್ಯದಿಂದಲೂ ಹೊರಗಿಡಲು ತೀರ್ಮಾನಿಸಲಾಗಿದೆ.
ಎಫ್ಐಎಚ್ ಹೇಳಿದ್ದೇನು?
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಮಿತ್ ರೋಹಿದಾಸ್ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ ಎಂದು ಎಫ್ಐಎಚ್ ಹೇಳಿಕೆ ನೀಡಿದೆ. ಎಫ್ಐಎಚ್ ತನ್ನ ಹೇಳಿಕೆಯಲ್ಲಿ, ‘ ಭಾರತ ಹಾಗೂ ಗ್ರೆಟ್ ಬ್ರಿಟನ್ ನಡುವಿನ ಪಂದ್ಯದ ವೇಳೆ ಅಮಿತ್ ರೋಹಿದಾಸ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಒಂದು ಪಂದ್ಯದಿಂದ ನಿಷೇಧಿಸಲಾಗಿದೆ. ಹೀಗಾಗಿ ಅವರು ಪಂದ್ಯ ಸಂಖ್ಯೆ 35 ರಲ್ಲಿ ಅಂದರೆ ಭಾರತ ಮತ್ತು ಜರ್ಮನಿ ನಡುವೆ ನಡೆಯಲ್ಲಿರುವ ಸೆಮಿಫೈನಲ್ ಪಂದ್ಯವನ್ನು ಆಡುವಂತಿಲ್ಲ ಎಂದಿದೆ. ಹೀಗಾಗಿ ಅಮಿತ್ ರೋಹಿದಾಸ್ ಅವರನ್ನು ಹೊರತುಪಡಿಸಿ ಉಳಿದ 15 ಆಟಗಾರರಿಂದ ಭಾರತ ಸೆಮಿಫೈನಲ್ಗೆ ತನ್ನ ತಂಡವನ್ನು ರಚಿಸಬೇಕಾಗಿದೆ.