ನವದೆಹಲಿ: ‘ಡಂಕಿ’ ಮಾರ್ಗದ ಮೂಲಕ ಅಮೆರಿಕಕ್ಕೆ ಕಳುಹಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಇಂಥ ಜನರು ಭಾರತದ ಪಾಸ್‌ಪೋರ್ಟ್‌ಗೆ ಅಪಕೀರ್ತಿ ತರುತ್ತಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಮನಮೋಹನ್ ಅವರನ್ನು ಒಳಗೊಂಡ ನ್ಯಾಯಪೀಠವು, ‘ನಿಮ್ಮಂಥ ಜನರಿಂದಾಗಿಯೇ ಭಾರತದ ಪಾಸ್‌ಪೋರ್ಟ್ ಮೌಲ್ಯ ಕಡಿಮೆಯಾಗಿದೆ’ ಎಂದು ಹೇಳಿತು.
‘ಆರೋಪವು ಗಂಭೀರವಾದುದು’ ಎಂದು ಪ್ರತಿಪಾದಿಸಿದ ನ್ಯಾಯಾಲಯವು, ಹರಿಯಾಣದ ಓಂ ಪ್ರಕಾಶ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
‘ಡಂಕಿ ಮಾರ್ಗ’ ಎಂಬುದು ಅಕ್ರಮ ವಲಸೆಯ ವಿಧಾನವಾಗಿದೆ. ಸಾಮಾನ್ಯವಾಗಿ ಅಮೆರಿಕ ಅಥವಾ ಬ್ರಿಟನ್ ದೇಶದಲ್ಲಿ ಅಕ್ರಮವಾಗಿ ನೆಲಸಲು ಬಯಸುವವರು ಈ ಮಾರ್ಗ ಅನುಸರಿಸುತ್ತಾರೆ.