ಉಡುಪಿ: ಯಕ್ಷಗಾನ ವೇಷಧಾರಿ ಈಶ್ವರ ಗೌಡ ಹೃದಯಾಘಾತದಿಂದ ನಿಧನರಾದ ಘಟನೆ ಬುಧವಾರ ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.

ಈಶ್ವರ ಗೌಡ ಮಂದಾರ್ತಿ ಮೇಳದ ಕಲಾವಿದರಾಗಿದ್ದರು. ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ದೇವಿ ಮಾಹಾತ್ಮ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು.
ಮಂದಾರ್ತಿ ಮೇಳದಲ್ಲಿ ತಂದೆ ಕೂಡ ವೇಷಧಾರಿಯಾಗಿದ್ದರು. ಈಶ್ವರ ಗೌಡ ಅವರು ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಪಾತ್ರ ನಿರ್ವಹಿಸಿದ್ದರು.
ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.




