ಉಡುಪಿ :ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ವಸತಿ ಸಮುಚ್ಚಯದ ಮನೆಗಳಿಗೆ ಜು.19ರಂದು ರಾತ್ರಿ ವೇಳೆ ನುಗ್ಗಿರುವ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಇದೇ ವಸತಿ ಸಮುಚ್ಚಯದ ಆರು ಮನೆಗಳಿಗೆ ಕಳೆದ ವರ್ಷದ ಸೆ.29ರಂದು ಕಳ್ಳರು ನುಗ್ಗಿ ಲಕ್ಷಾಂತರ ರೂ. ವೌಲ್ಯದ ನಗ-ನಗದು ಕಳವು ಮಾಡಿ ಪರಾರಿಯಾಗಿದ್ದರು. ಉಡುಪಿ ನಗರ ಠಾಣೆಯಿಂದ ಅನತಿ ದೂರದಲ್ಲಿರುವ ಈ ವಸತಿ ಸಮುಚ್ಚಯದಲ್ಲಿ ಒಂಭತ್ತು ತಿಂಗಳ ಅಂತರದಲ್ಲಿ ಇದೀಗ ಮತ್ತೆ ಕಳ್ಳತನ ಆಗಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಮಧ್ಯೆ ಮತ್ತೆ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.