ಪಡುಬಿದ್ರಿ: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಜನವರಿಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧಿಸಿ ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ದಿವಾಕರ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಮುಂಬೈಗೆ ಹೋಗಿದ್ದಾಗ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ಅವರ ಮನೆಯಿಂದ ಕಳವು ಮಾಡಲಾಗಿತ್ತು. ಬಾಗಿಲ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು, ದೇವರ ಕೋಣೆ, ಮಾಸ್ಟರ್ ಬೆಡ್ ರೂಂ ಕಪಾಟಿನಲ್ಲಿದ್ದ ಬೆಳ್ಳಿ, 30 ಗ್ರಾಂ ತೂಕದ ಕರಗಿಸಿದ ಗಟ್ಟಿ ಚಿನ್ನ, ಹಾಡೊ ಕಂಪನಿ ವಾಚ್, ನಗದು ಸೇರಿ ಒಟ್ಟು ₹19.05 ಲಕ್ಷದ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಸಿ.ಸಿ.ಟಿ.ವಿ. ಕ್ಯಾಮೆರಾದ ದಿಕ್ಕನ್ನು ಬದಲಿಸಿ ಡಿವಿಆರ್ ಒಯ್ದಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಅಂತರರಾಜ್ಯ ಕಳ್ಳ ತಮಿಳುನಾಡಿನ ತಿರುಕ್ಕುರುಂಕುಡಿಯ ಪಟ್ಟಾಯಂನ ಎಸಾಕ್ಕಿ ರಾಜ (28), ಆತನ ಸಹಚರ ನಂಬಿ ರಾಜ (23) ಅವರನ್ನು ಬಂಧಿಸಿ ತನಿಖೆ ನಡೆಸಿದ್ದರು. ಪ್ರಕರಣದ ಉಳಿದ ಆರೋಪಿಗಳಾದ ತಮಿಳುನಾಡಿನ ಮೂವರನ್ನು ಪತ್ತೆ ಮಾಡಿ ಸ್ವತ್ತು ಸ್ವಾಧೀನಪಡಿಸುವ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ದ ಕೇರಳ, ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ, ಕಾಪು ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ.ಐ, ಶುಭಕರ, ಸಿಬ್ಬಂದಿ ಕಾಪು ಠಾಣೆಯ ಅಹಮ್ಮದ್ ರಫೀಕ್, ನಾರಾಯಣ, ಮೋಹನ ಚಂದ್ರ, ರಘು, ಪಡುಬಿದ್ರಿ ಠಾಣೆಯ ಎಎಸ್‌ಐ ರಾಜೇಶ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ್ ಆಲಿ, ಕಾಪು ವೃತ್ತ ಕಚೇರಿಯ ಸಿಬ್ಬಂದಿ ಶರಣಪ್ಪ, ಜೀವನ್, ಜಗದೀಶ್, ಸಿಡಿಆರ್ ವಿಭಾಗದ ದಿನೇಶ್, ನಿತಿನ್ ಭಾಗವಹಿಸಿದ್ದರು.




