ಬಂಟ್ವಾಳ: ಹೆಸರಾಂತ ಬಿಲ್ಡರ್ ಮನೆಯಲ್ಲಿ ಕೆಲಸದಾತನೇ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದಿದೆ.


ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂ ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 27,50,000 ರೂ ನಗದು ಹಾಗೂ 4,96,000 ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಮೊಹಮ್ಮದ್ ಝಫರುಲ್ಲಾ ಎಂಬವರ ಜೊತೆ 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಮಂಜೇಶ್ವರ ಮೂಲದ ಆಲಿ ಎಂಬಾತ ಸೇರಿದ್ದ. ಆತನಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ದು, ಮಾಲಕರ ಜೊತೆ ಹೆಚ್ಚಿನ ವಿಶ್ವಾಸ ಹೊಂದಿದ್ದ ಅದರಿಂದ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸವೇ ಮಾಲಕರಿಗೆ ಮುಳುವಾಗಿ ಪರಿಣಮಿಸಿತು.
ಅ.18ರಂದು ಮನೆ ಮಂದಿ ಎಲ್ಲರು ಮನೆಗೆ ಬೀಗ ಹಾಕಿ ಮಂಗಳಾದೇವಿ ಜೆಪ್ಪುನಲ್ಲಿರುವ ತಮ್ಮನ ಮನೆಗೆ ಹೋಗಿದ್ದು, ಈ ಸಂಧರ್ಭದಲ್ಲಿ ಮನೆಯ ಬೀಗದ ಕೀ ಯನ್ನು ಆಲಿಯಲ್ಲಿ ನೀಡಿ ಹೋಗಿದ್ದರು. ನಂತರ ಅ.19ರಂದು ಕಟ್ಟಡ ಕಾಮಗಾರಿಯ ವಿಚಾರಕ್ಕೆ ಮಾಲಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಬಂದಿತ್ತು.
ಆದರೆ ಈ ವಿಚಾರವನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಅ.20ರಂದು ಅಗತ್ಯ ಕೆಲಸವೊಂದರ ಸಲುವಾಗಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿಂದ ಕರೆ ಮಾಡಿದಾಗಲೂ ಕೂಡ ಈತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅ.23ರಂದು ಊರಿಗೆ ವಾಪಾಸು ಆದ ಇವರು ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಕೀ ಕೊಡುವಂತೆ ಆತನಿಗೆ ಪೋನ್ ಮಾಡುವಾಗ ಮೊಬೈಲ್ ಸ್ವಿಚ್ ಆಫ್ ಅಂತ ಬಂದಿತ್ತು. ಇದರಿಂದ ಸಂಶಯಗೊಂಡ ಮಾಲಕರು ಮನೆಯ ಹಿಂಬದಿಯಲ್ಲಿ ಇರುವ ಕಿಟಕಿಯಿಂದ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು.
ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿ, ಪೋಲೀಸ್ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಲಾಗಿದ್ದ ರೂಪಾಯಿ 25 ಲಕ್ಷ ರೂಪಾಯಿ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಲಾಗಿದ್ದ 2,50,000 ರೂಪಾಯಿ ಹಾಗೂ 4,96,000 ರೂಪಾಯಿ ಮೌಲ್ಯದ 24 ಗ್ರಾಮ್ ತೂಕದ ಬ್ರಾಸ್ ಲೈಟ್, 16 ಗ್ರಾಮ್ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಮ್ ತೂಕದ ಚಿನ್ನದ ಬಳೆಗಳು, 8 ಗ್ರಾಮ್ ತೂಕದ ಚಿನ್ನದ ಬೆಂಡೋಲೆ, 32 ಗ್ರಾಮ್ ತೂಕದ ಚಿನ್ನದ ಮಾಲೆ, 4 ಗ್ರಾಮ್ ತೂಕದ ಚಿನ್ನದ ಸರ ಕಳವು ಆಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆಯನ್ನು ನಡೆಸಿದ್ದಾರೆ.




