
ಮಂಜೇಶ್ವರ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಕಳವು ಕೃತ್ಯ ನಡೆದಿದ್ದು, ಪ್ರಾರ್ಥನಾ ಮಂದಿರ , ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಯಿಂದ ಹಾಗೂ ಅಂಗಡಿಯಿoದ ಕಳವು ನಡೆದಿದೆ. ಶನಿವಾರ ರಾತ್ರಿ ಅಥವಾ ಭಾನುವಾರ ಮುಂಜಾನೆ ಕಳವು ಕೃತ್ಯ ನಡೆದಿರಬಹುದೆಂದು ಅಂದಾಜಿಸಲಾಗಿದೆ. ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಲೆನಾಡ ಹೆದ್ದಾರಿ ಮುಡಿಪು ರಸ್ತೆಯ ಬಜಿಲಕರಿಯ ಎಂಬಲ್ಲಿನ ಬಾಲ ಏಸು ಪ್ರಾರ್ಥನಾ ಮಂದಿರದ ಬೀಗವನ್ನು ಮುರಿದು ಎರಡು ಕಾಣಿಕೆ ಡಬ್ಬಿಯಿಂದ ಸುಮಾರು ಎರಡು ಸಾವಿರ ರೂ, ಪಾವಳ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಯಿಂದ ಸುಮಾರು ಮೂರು ಸಾವಿರ ರೂ, ಮೂರುಗೋಳಿ ಸಮೀಪದ ಪಾಡಿ ಎಂಬಲ್ಲಿ ಬಶೀರ್ ಎಂಬವರ ರಬಾ ಜನರಲ್ ಸ್ಟೋರ್ ಅಂಗಡಿಯಿoದ ಡ್ರವರ್ ಹಾಗೂ ಹರಕೆ ಕಾಣಿಕೆ ಡಬ್ಬಿಯಿಂದ ಒಟ್ಟು 10 ಸಾವಿರ ರೂ ಹಾಗೂ ಬೆಲೆ ಬಾಳುವ ಮೊಬೈಲ್‌ನ್ನು ಕಳವುಗೈದಿದ್ದಾರೆ. ಭಾನುವಾರ ಬೆಳಿಗ್ಗೆ ಕಳವುಗೈದ ಬಗ್ಗೆ ಬೆಳಕಿಗೆ ಬಂದಿದೆ. ಪ್ರಾರ್ಥನಾ ಮಂದಿರದಿoದ ಸಿಸಿ ಕ್ಯಾಮರದಲ್ಲಿ ಹೆಲ್ಮೆಟ್ ಧರಿಸಿದ ಓರ್ವ ವ್ಯಕ್ತಿಯ ದೃಶ್ಯ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಪ್ರಾರ್ಥನಾ ಮಂದಿರದಿಂದ ಕಳವಿನ ಬಗ್ಗೆ ವರ್ಕಾಡಿ ಚರ್ಚ್ ನ ಪಾಲನಾ ಮಂಡಳಿ ಉಪಾಧ್ಯಕ್ಷ ರಾಜೇಶ್ ದಿ ಸೋಜಾ,ಅಂಗಡಿ ಮಾಲಕ ಬಶೀರ್, ಕೊರಗಜ್ಜ ಕಟ್ಟೆ ಸಮಿತಿ ಸದಸ್ಯ ಪುಷ್ಪರಾಜ್ ಎಂಬವರುಪೊಲೀಸರಿಗೆ ನೀಡಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೋಲೀಸರು ಕೇಸು ತನೆಖೆ ನಡೆಸುತ್ತಿದ್ದಾರೆ. ಕಳವು ಕೃತ್ಯನಡೆದ ಸ್ಥಳಗಳಿಗೆ ಮಂಜೇಶ್ವರ ಪೋಲೀಸರ ನೇತೃತ್ವದಲ್ಲಿ ಬೆರಳಚ್ಚು ತಜ್ಞರು, ಶ್ವಾನ ದಳ ತಲುಪಿ ತನಿಖೆ ನಡೆಸಿದ್ದಾರೆ. ಕಳೆದ ತಿಂಗಳು 21ರಂದು ವರ್ಕಾಡಿ ಚರ್ಚ್ ಹಾಗೂ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಕಾಣಿಕೆ ಹುಂಡಿ ಕಳವು ನಡೆದಿತ್ತು.





