ಮಂಜೇಶ್ವರ: ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿದ ಪ್ರವಾಸೋದ್ಯಮ ವಿಶ್ರಾಂತಿ ಕೇಂದ್ರ ಸಮುದ್ರ ಪಾಲಾಗುತ್ತಿದೆ. ಕೇರಳ ಸರ್ಕಾರ ಮಂಜೇಶ್ವರದ ಕಣ್ವತೀರ್ಥ ಕಡಲ ತೀರದಲ್ಲಿ ಪ್ರವಾಸಿಗರಿಗಾಗಿ ಭಾರೀ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಶ್ರಾಂತಿ ಕೇಂದ್ರ ಇತ್ತೀಚೆಗೆ ಸಂಭವಿಸಿದ ಸಮುದ್ರಕ್ಷೋಭೆಯಲ್ಲಿ ಕಟ್ಟಡದ ಒಂದು ಭಾಗ ಸಮುದ್ರ ಪಾಲಾಗಿದೆ.
1 ಕೋಟಿ 15 ಲಕ್ಷ ರೂ ವೆಚ್ಚದಲ್ಲಿ ಜಿಲ್ಲಾ ಟೂರಿಸಂ ಪ್ರೋತ್ಸಾಹ ಮಂಡಳಿಯ ಮೂಲಕ ಈ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗುತ್ತಿತ್ತು. 2023ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವು ಅಡೆ ತಡೆಗಳ ಕಾರಣದಿಂದ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಸುಮಾರು 60 ಶೇಕಡಾ ಕಾಮಗಾರಿ ಮುಗಿದಿದೆ. ಇತ್ತೀಚೆಗಷ್ಟೇ ನಿರಂತರವಾಗಿ ಸುರಿದ ಮಳೆಯಿಂದ ಸಂಭವಿಸಿದ ಸಮುದ್ರಕ್ಷೋಭೆ ಕಟ್ಟಡದ ಮೂರನೇ ಭಾಗವನ್ನು ನಾಶಮಾಡಿದೆ. ಮುಂದಿನ ದಿನಗಳಲ್ಲಿ ಮತ್ತೆ ಸಮುದ್ರಕ್ಷೋಭೆ ಸಂಭವಿಸಿದರೆ ಇಡೀ ಕಟ್ಟಡವೇ ನಾಶವಾಗುವ ಭೀತಿ ಎದುರಾಗಿದೆ.