ಮಂಗಳೂರು: ಜೂಜಿನ ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು, ಕೋಳಿ ಅಂಕವನ್ನು ನಡೆಸಲು ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಎಸ್.ಪಿ ಸಿಬಿ ರಿಷ್ಯಂತ್ ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಕೋಳಿ ಅಂಕ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಹಾಗಾಗಿ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು. ಇನ್ನು ಮುಂಬರುವ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.