ಮಂಗಳೂರು: ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಮೂವರು ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳು ಕಳವಾಗಿರುವ ಕುರಿತಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೀಲಾ (55) ಅವರು ಅಕ್ಕನ ಮಗಳು ಸ್ಮಿತಾ ಜತೆ ದೇವಸ್ಥಾನಕ್ಕೆ ಬಂದಿದ್ದು, ದೇವರ ದರ್ಶನ ಪಡೆದು, ಊಟ ಮಾಡಿ ಕೈತೊಳೆದು ದೇವಸ್ಥಾನದ ಅಂಗಳಕ್ಕೆ ಬಂದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು 6 ಪವನ್‌ನ ಚಿನ್ನದ ಸರ ಕಳವಾಗಿರುವುದು ತಿಳಿದು ಬಂದಿದೆ. ಇದೇ ವೇಳೆ ದೇವಸ್ಥಾನದ ಆವರಣದಲ್ಲಿದ್ದ ಕಮಲಾಕ್ಷಿ (75) ಅವರ ಕುತ್ತಿಗೆಯಲ್ಲಿದ್ದ 3.75 ಪವನ್ ತೂಕದ ಚಿನ್ನದ ಸರ ಮತ್ತು ಮೀನಾಕ್ಷಿ (75) ಅವರ 4.50 ಪವನ್ ತೂಕದ ಚಿನ್ನದ ಸರ ಕಾಣೆಯಾಗಿರುವುದೂ ಬೆಳಕಿಗೆ ಬಂದಿದೆ. ಕಳವು ಮಾಡಲಾದ ಚಿನ್ನದ ಸರಗಳ ಒಟ್ಟು ಮೌಲ್ಯ ಸುಮಾರು 4 ರೂ. ಲಕ್ಷ ಎಂದು ಅಂದಾಜಿಸಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.