ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿಯವರನ್ನು ರೌಡಿಶೀಟರ್ಎಂಬ ನೆಲೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅವರು ಹೈಕೋರ್ಟ್ ನಿರ್ದೇಶನದಂತೆ ಇದೀಗ ಮತ್ತೆ 3ನೇ ಬಾರಿಗೆ ಗಡೀಪಾರು ಮಾಡಿ ಆದೇಶ ನೀಡಿದ್ದು, ಮಾ. 16ರಂದು ಈ ಆದೇಶ ಹೊರಡಿಸಿದ್ದಾರೆ. ಮಾ. 16ರಿಂದ ಸೆ. 16ರ ವರೆಗೆ ಅವರನ್ನು ದ.ಕ. ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಆದೇಶಿಸಿದ್ದಾರೆ.

ಆದೇಶವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದ ಪೊಲೀಸರ ತಂಡ ಮಾ. 16ರಂದು ರಾತ್ರಿ ಉಜಿರೆ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಮನೆಗೆ ತೆರಳಿದ್ದು, ಆದರೆ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೆಪಿ ಆ್ಯಕ್ಟಿನ ಅನ್ವಯ ತಲೆಮರೆಸಿಕೊಂಡಿರುವ ವ್ಯಕ್ತಿಯ ಗಡೀಪಾರಿನ ಪ್ರಕ್ರಿಯೆ ಪ್ರಕಾರ ಅವರ ಮನೆಯ ಗೋಡೆಗೆ ಆದೇಶ ಪ್ರತಿ ಅಂಟಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ದ.ಕ. ಜಿಲ್ಲೆಯಿಂದ ಒಂದು ವರ್ಷ ಗಡೀಪಾರು ಮಾಡಿ 2025ರ ಸೆ. 17ರಂದು ಮೊದಲ ಬಾರಿಗೆ ಒಂದು ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ಗೆ ಹೋಗಿದ್ದು, ಸರಿಯಾದ ಕಾರಣ ನೀಡುವಂತೆ ತಿಳಿಸಿದ ಮೇರೆಗೆ ಪುತ್ತೂರಿನ ಎಸಿ ಕೋರ್ಟ್ನಲ್ಲಿ ವಿಚಾರಣೆ ನಡೆದು ಡಿ. 16ರಂದು 2ನೇ ಬಾರಿಗೆ 9 ತಿಂಗಳ ಅವಧಿಗೆ ಗಡೀಪಾರು ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಈ ಕುರಿತು ಉಜಿರೆಯಲ್ಲಿ ಪೊಲೀಸ್ ಅನೌನ್ಸ್ಮೆಂಟ್ ಕೂಡ ಮಾಡಲಾಗಿತ್ತು.
ಎರಡನೇ ಗಡೀಪಾರು ಆದೇಶದ ವಿರುದ್ಧವೂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಅವರ ಅರ್ಜಿಯ ಆಕ್ಷೇಪಣೆಗಳನ್ನು ಪರಿಗಣಿಸಿ 3 ವಾರದಲ್ಲಿ ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಪುತ್ತೂರು ಎಸಿಯವರು ಇದೀಗ ಮತ್ತೆ ಮಾ. 16ರಿಂದ ಸೆ. 16ರ ವರೆಗೆ ಅವರನ್ನು ದ.ಕ. ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಆದೇಶಿಸಿದ್ದಾರೆ. ಪ್ರಾರಂಭದಲ್ಲಿ ಒಂದು ವರ್ಷಕ್ಕೆ, 2ನೇ ಬಾರಿಗೆ ಅದು 9 ತಿಂಗಳಿಗೆ ಇಳಿಕೆಯಾಗಿತ್ತು. ಇದೀಗ ಮೂರನೇ ಬಾರಿಯ ಗಡಿಪಾರು ಆದೇಶ 6 ತಿಂಗಳಿಗೆ ಇಳಿಕೆಯಾಗಿದೆ.
ಇನ್ನು ಗಡೀಪಾರು ಆದೇಶ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.




