ಪಾಟ್ನಾ, ಜುಲೈ 11: ಪ್ರಧಾನಿ ಮೋದಿಯವರಿಗೆ ಹಣ ನೀಡುವವರೇ ನಮಗೂ ಹಣಕಾಸು ಒದಗಿಸುತ್ತಾರೆ ಎಂದು ಜನಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಹೇಳಿದ್ದಾರೆ. ಟಿವಿ9 ಭಾರತ್ವರ್ಷ್ ಬಿಹಾರದ ಪಾಟ್ನಾದಲ್ಲಿ ಆಯೋಜಿಸಿರುವ ‘ಸತ್ತಾ ಸಮ್ಮೇಳನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಸೂರಜ್ ಪಕ್ಷದ ಹಣಕಾಸಿನ ಮೂಲದ ಬಗ್ಗೆ ಕೇಳಿದಾಗ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ತಮ್ಮ ಉತ್ತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿಗೆ ಹಣ ನೀಡುವವರೇ ನಮ್ಮ ಪಕ್ಷಕ್ಕೂ ನೀಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಪಕ್ಷದ ಹಣಕಾಸಿನ ಮೂಲದ ಕುರಿತು ಮಾತನಾಡಿರುವ ಪ್ರಶಾಂತ್ ಕಿಶೋರ್, ಯಾವುದೇ ಪತ್ರಕರ್ತ, ವೈದ್ಯ, ವಕೀಲರಿಗೆ ಹಣ ಎಲ್ಲಿಂದ ಬರುತ್ತೆ? ಅವರು ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಪತ್ರಕರ್ತರು ಅವರ ವೃತ್ತಿ ಮಾಡುತ್ತಾರೆ, ವಕೀಲರು ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ನಾನು ಯಾವುದೇ ಉದ್ಯಮ ಮಾಡುತ್ತಿಲ್ಲ, ಸರ್ಕಾರಿ ಕೆಲಸವೂ ಇಲ್ಲ, ಎಂಎಲ್ಎ, ಎಂಪಿಯೂ ಆಗಿಲ್ಲ, ಹಾಗಾದರೆ ಹಣ ಎಲ್ಲಿಂದ ಬರಬೇಕು. ಹಣವು ಕಳೆದ ಹತ್ತು ವರ್ಷಗಳಿಂದ ನಾವು ಯಾರಿಗೆ ಸಹಾಯ ಮಾಡಿದ್ದೆವೋ ಅಲ್ಲಿಂದಲೇ ಬರುತ್ತಿದೆ. ಕೆಟ್ಟ ಕೆಲಸ ಮಾಡಿ ಗಳಿಸಿಲ್ಲ. ಈಗ ಅವರ ಬಳಿ ಇಷ್ಟು ವರ್ಷದಿಂದ ನಾವು ಅಷ್ಟೆಲ್ಲಾ ಸಹಾಯ ಮಾಡಿದ್ದೇವೆ ಈಗ ನಮಗೂ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದೇವೆ ಎಂದರು.





