ಉಡುಪಿ: ಕಾಂಗ್ರೆಸಿಗರು ಬಾಬರ್ ಮತ್ತು ಅವನ ಸಂತಾನವನ್ನು ಅಪ್ಪನಿಗಿಂತ ಜಾಸ್ತಿ ಹೊತ್ತುಕೊಂಡಿದ್ದಾರೆ. ಬಾಬರ್ ಸಂತಾನವನ್ನು ಪ್ರೀತಿಸಿದಷ್ಟು ಅವರ ಅಪ್ಪನನ್ನು ಪ್ರೀತಿಸುತ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ಕೂಡ ನಮಗೆ ಪವಿತ್ರ. ಜ್ಞಾನ ವ್ಯಾಪಿಯ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಸನಾತನಿಗಳ ವಿರುದ್ದ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ. ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಲು ಅವಕಾಶ ಇದೆ ಎಂದರು.
ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕ ಬೀಜಾಂಕುರ ಆಗಿದೆ. ಬಾಬರ್ ಮತ್ತು ಅವನ ಸಂತಾನ ಓಲೈಸುವವರಿಗೂ ವೋಟ್ ಬ್ಯಾಂಕ್ ರಾಜಕೀಯದ ಅನಿವಾರ್ಯತೆ ಉಂಟಾಗಿದೆ. ರಾಮನನ್ನು ಬಿಟ್ಟರೆ ರಾಷ್ಟ್ರ ಇಲ್ಲ, ವೋಟ್ ಇಲ್ಲ ಎನ್ನುವುದು ಗೊತ್ತಾಗಿದೆ.
ರಾಮ ಕಾಲ್ಪನಿಕ ಎಂದವರು ಕೂಡ ರಾಮನಾಮ ಜಪ ಆರಂಭಿಸಿದ್ದಾರೆ. ಅತಿಕ್ರಮಣಕಾರರನ್ನು ಬಿಟ್ಟು ರಾಮಕೃಷ್ಣ ಶಿವನ ಜೊತೆ ಮುಸಲ್ಮಾನರು ಗುರುತಿಸಿಕೊಳ್ಳುತ್ತಿದ್ದಾರೆ. ಮುಸಲ್ಮಾನರ ಪೂಜಾ ಪದ್ದತಿಯನ್ನು ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರೋದು ಡೌಟ್ ಎಂದಿರುವ ವೀರಪ್ಪ ಮೊಯ್ಲಿಗೆ ತೀಕ್ಷ್ಮವಾಗಿ ಕುಟುಕಿರುವ ರವಿ, ನಮಗೆ ವೀರಪ್ಪ ಮೊಯ್ಲಿಯ ಸರ್ಟಿಫಿಕೇಟ್ ಅವಶ್ಯಕತೆ ಇದೆಯಾ?. ರಾಮ ಕಾಲ್ಪನಿಕ ಎಂದು ಕಾಂಗ್ರೆಸಿಗರು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಾನು ದೇವಸ್ಥಾನಕ್ಕೆ ಹೋಗಲ್ಲ, ಸಂವಿಧಾನ ಮುಖ್ಯ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಸಂವಿಧಾನ ನಮಗೂ ಮುಖ್ಯ. ಅದರ ಮೊದಲ ಪುಟದಲ್ಲೇ ರಾಮ ಇದ್ದಾನೆ ಎಂದರು.