ಉಡುಪಿ: ರಸ್ತೆ ಬದಿಯ ಅಣಬೆ ತಿಂದು ಮೂವರು ಅಸ್ವಸ್ಥಗೊಂಡ ಘಟನೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ನಡೆದಿದೆ.
ಅಸ್ವಸ್ಥಗೊಂಡವರನ್ನು ಗದಗ ಮೂಲದ ಅಣ್ಣಪ್ಪ (45) ಸುಜಾತ (25) ಹಾಗೂ ಸಂಗೀತಾ (7) ಎಂದು ಗುರುತಿಸಲಾಗಿದೆ. ಇವರು ಮಲ್ಪೆ ಸಮೀಪದ ತೊಟ್ಟಂನಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ರಸ್ತೆ ಬದಿಯಲ್ಲಿ ಬೆಳೆದಿದ್ದ ಅಣಬೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಮನೆಯಲ್ಲಿ ಹಸಿ ಅಣಬೆಯನ್ನೇ ಹಂಚಿ ತಿಂದಿದ್ದಾರೆ. ಬಳಿಕ ಮೂವರು ತೀವ್ರ ಅಸ್ಬಸ್ಥಗೊಂಡಿದ್ದು, ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಆ್ಯಂಬುಲೆನ್ಸ್ ಮೂಲಕ ಈ ಮೂವರನ್ನೂ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ತಿಳಿದುಬಂದಿದೆ.