ಬೆಂಗಳೂರು: ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಜಾಮೀನು ಸಿಕ್ಕಿದೆ. ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ.
ಅ.27ರ ಸಂಜೆ ವೇಳೆಗೆ ವರ್ತೂರು ಸಂತೋಷ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡು ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧನವಾಗುತ್ತಿದ್ದಂತೆ ಜಾಮೀನು ಕೋರಿ ಸಂತೋಷ್ ಅವರು ಅರ್ಜಿ ಸಲ್ಲಿಸಿದ್ದರು.
ಸಂತೋಷ್ ಪರ ವಕೀಲರಾದ ನಟರಾಜ್ ಅವರು ವಾದ ಮಂಡಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ಅ.27 ಕಾಯ್ದಿರಿಸಿತ್ತು.