ಗುಂಡ್ಲುಪೇಟೆ(ಚಾಮರಾಜನಗರ): ಟಿಪ್ಪರ್ ಲಾರಿ ಹರಿದು ಕೇರಳ ಮೂಲದ ಮೂವರು ದುರ್ಮರಣ ಹೊಂದಿರುವ ಘಟನೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ(ಸೆ.17) ನಡೆದಿದೆ.
ಕೇರಳ ಮೂಲದ ಪತಿ, ಪತ್ನಿ ಮತ್ತು ಮಗ ಸೇರಿ ಒಂದೇ ಬೈಕ್ ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದರು ಎನ್ನಲಾಗುತ್ತಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಕೂತನೂರು ಗುಡ್ಡದಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ಕುಡಿದ ಮತ್ತಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಎನ್ನಲಾಗುತ್ತಿದೆ.
ಈತನ ಅಜಾಗರೂಕತೆಯ ಚಾಲನೆಯಿಂದ ಮುಂಬದಿ ಹೋಗುತ್ತಿದ್ದ ಕೇರಳ ಮೂಲದ ಬೈಕ್ ಗೆ ಢಿಕ್ಕಿ ಹೊಡೆದ್ದಿದ್ದಾನೆ. ಬೈಕ್ ಸವಾರನ ಮೇಲೆ ಲಾರಿ ಹರಿದು ದೇಹ ರಸ್ತೆಯಲ್ಲೇ ಬಿದ್ದಿದ್ದು, ಇನ್ನಿಬ್ಬರು ಲಾರಿ ಅಡಿಯಲ್ಲಿ ಬೈಕ್ ಸಮೇತ ಸಿಲುಕಿಕೊಂಡಿದ್ದರೂ ಸಹ ಸುಮಾರು 300 ಮೀಟರ್ ನಷ್ಟು ಲಾರಿ ಎಳೆದುಕೊಂಡು ಬಂದಿದೆ. ಇಬ್ಬರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಹರಡಿಕೊಂಡು ಬಿದ್ದಿದೆ.