ಮಂಜೇಶ್ವರ : ಕೇರಳ – ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯ ಕೇರಳ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ ಲಾಟರಿ ಮಾರಾಟದ ಸ್ಟಾಲ್ ಗಳನ್ನು ಬಲವಂತವಾಗಿ ತೆರವುಗೊಳಿಸಲು ಆಗಮಿಸಿದ ತಲಪಾಡಿ ಟೋಲ್ ಸಿಬ್ಬಂದಿಗಳನ್ನು ತಡೆದು ಹಿಂದಕ್ಕೆ ಕಳುಹಿಸಲಾಯಿತು. ಇಲ್ಲಿ ಸುಮಾರು 25ಕ್ಕೂ ಮಿಕ್ಕಿದ ಲಾಟರಿ ಸ್ಟಾಲ್ ಗಳು ಕಾರ್ಯಾಚರಿಸುತ್ತಿದ್ದು, ಇಲ್ಲಿ ಕರ್ನಾಟಕ ಭಾಗದ ಟೋಲ್ ಸಿಬ್ಬಂದಿಗಳು ನಿತ್ಯ ಕಿರುಕುಳ ನೀಡುತ್ತಿದ್ದರಲ್ಲದೇ, ಗುರುವಾರದಂದು ತೆರವಿಗೆ ಗಡು ವಿಧಿಸಿದ್ದರು. ಶುಕ್ರವಾರ ಬೆಳಿಗ್ಗೆ ಸ್ಟಾಲ್ ಗಳನ್ನು ತೆರವುಗೊಳಿಸಲು ಉಳ್ಳಾಲ ಪೋಲಿಸರು ಸಹಾಯದಿಂದ ಬುಲ್ಡೋಜರ್ ಗಳನ್ನು ಸ್ಥಳಕ್ಕೆ ತಂದಾಗ ಕೂಡಲೇ ಸ್ಕಳಕ್ಕೆ ದೌಡಾಯಿಸಿದ ಮಾಜೀ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾ.ಪಂ.ಸದಸ್ಯ ಮುಸ್ತಫಾ ಉದ್ಯಾವರ ಕೂಡಲೇ ಕಾರ್ಯಾಚರಣೆ ನಡೆಸದಂತೆ ತಡೆಯೊಡ್ಡಿದರು. ಮಂಜೇಶ್ವರ ಠಾಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಉಭಯ ಠಾಣೆಗಳ ಪೊಲೀಸರ ಬಳಿ ಚರ್ಚೆ ನಡೆಸಲಾಯಿತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು, ಕೇರಳ ಭಾಗದ ಲಾಟರಿ ವರ್ತಕರಿಗೆ ಯಾವುದೇ ತೊಂದರೆ ನೀಡಬಾರದೆಂದೂ, ನೀಡಿದ್ದಲ್ಲಿ ಪಕ್ಷಾತೀತವಾಗಿ ತೀವ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಯಿತು. ಮುಖಂಡರಾದ ಓಂ ಕೃಷ್ಣ, ಭಾಸ್ಕರ ಶೆಟ್ಟಿಗಾರ್, ಪ್ರಶಾಂತ್ ಕನಿಲ, ವಿಜಯನ್, ಸುಕೇಶ್ ಬೆಜ್ಜ, ಶ್ರೀಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.