ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಸುಂಟರಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಭಾರೀ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ.
ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಭಾರಿ ಶಬ್ಧದೊಂದಿಗೆ ಸುಂಟರಗಾಳಿ ಅಪ್ಪಳಿಸಿದೆ. ರಟ್ಟಾಡಿಯಲ್ಲಿ ಭೀಕರ ಸುಂಟರಗಾಳಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಮಾವಾಸ್ಯೆಬೈಲು ಗ್ರಾಮ ಪಂಚಾಯತ್ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಮರ, ಮನೆಗಳ ಹಾನಿ ಕುರಿತು ಅಂದಾಜು ಲೆಕ್ಕಚಾರ ನಡೆಸಿದ್ದಾರೆ.
ರಟ್ಟಾಡಿ ವ್ಯಾಪ್ತಿಯಲ್ಲಿರುವ ಸಾವಿರಾರು ಮರಗಳು ಧರೆಗುರುಳಿವೆ. 5 ಸಾವಿರಕ್ಕೂ ಅಧಿಕ ಅಡಿಕೆ ಮರ, 2 ಸಾವಿರದಷ್ಟು ರಬ್ಬರ್ ಮರ ಹಾಗೂ ತೆಂಗಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿದೆ. ರಟ್ಟಾಡಿ ವ್ಯಾಪ್ತಿಯ ಹಲವು ಮನೆಗಳಿಗೂ ಸುಂಟರಗಾಳಿಯಿಂದ ಹಾನಿಯಾಗಿದೆ.
ಅಮಾಸೆಬೈಲು ರಟ್ಟಾಡಿಯಲ್ಲಿ ಕಾಣಿಸಿಕೊಂಡ ಭೀಕರ ಸುಂಟರಗಾಳಿಯ ಎಫೆಕ್ಟ್‌ನಿಂದಾಗಿ ರಟ್ಟಾಡಿ ನಂಜಿನ ಹಾಡಿ ಕತ್ಗೋಡು ಎಂಬಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಸುಂಟರಗಾಳಿಯ ಆರ್ಭಟಕ್ಕೆ ಮನೆಯ ಪಕ್ಕದಲ್ಲಿದ್ದ ಮರ ಉರುಳಿ ಬಿದ್ದಿದೆ. ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬ ಸುಂಟರಗಾಳಿಯಿಂದ ಅತಂತ್ರಕ್ಕೆ ಸಿಲುಕಿದೆ. ದಿಢೀರನೆ ಕಾಣಿಸಿಕೊಂಡಿದ್ದ ಸುಂಟರಗಾಳಿಯಿಂದ ರಟ್ಟಾಡಿ ಗ್ರಾಮದಲ್ಲಿ ಅಲ್ಲೋಲಕಲ್ಲೋಲವೇ ಉಂಟಾಗಿದೆ.