ತಡೆಬೇಲಿ ದಾಟಿ ಸಮುದ್ರಕ್ಕಿಳಿದು ನೀರಾಟದಲ್ಲಿ ತೊಡಗಿದ ಪ್ರವಾಸಿಗರು
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಕೊಳ್ಳದಿದ್ದರೆ ಅನಾಹುತ ಸಂಭವಿಸುವುದು ಗ್ಯಾರಂಟಿ.!
ಉಡುಪಿ: ಕಳೆದ ಒಂದು ವಾರದಿಂದ ಕರಾವಳಿಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರ ವಹಿಸಲಾಗಿದೆ. ಆದರೂ ಅಪಾಯ ಲೆಕ್ಕಿಸದೆ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಸಾಹಸ ಮಾಡುತ್ತಿದ್ದು, ಅವರನ್ನು ತಡೆಯುವವರೇ ಇಲ್ಲದಂತಾಗಿದೆ.
ಮಳೆಗಾಲದಲ್ಲಿ ಜನರು ಸಮುದ್ರದ ನೀರಿಗೆ ಇಳಿಯದಂತೆ ಮುಂಜಾಗ್ರತ ಕ್ರಮವಾಗಿ ಮಲ್ಪೆ ಬೀಚ್ನ ಉದ್ದಕ್ಕೂ ತಡೆಬೇಲಿ ಅಳವಡಿಸಿಲಾಗಿತ್ತು. ನೆಟ್ ಬೇಲಿಯನ್ನು ದಾಟಿ ಯಾರೂ ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ ಹೇರಲಾಗಿತ್ತು. ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಲ್ಪೆ ಬೀಚ್ಗೆ ಆಗಮಿಸಿದ್ದು, ಹೀಗೆ ಬಂದವರಲ್ಲಿ ಬಹುತೇಕ ಮಂದಿ ತಡೆಬೇಲಿ ದಾಟಿ ಸಮುದ್ರಕ್ಕೆ ಇಳಿದು ನೀರಾಟದಲ್ಲಿ ತೊಡಗಿದ್ದಾರೆ. ಬೀಚ್ನ ಮುಖ್ಯಭಾಗದಲ್ಲಿ ದಕ್ಷಿಣದ ಸೀವಾಕ್ ವರೆಗೆ ಪ್ರವಾಸಿಗರು ಸಮುದ್ರಕ್ಕಿ ಇಳಿದು ಆಟವಾಡುತ್ತಿರುವುದು ಕಂಡು ಬಂದಿದೆ. ಸೀವಾಕ್ ಪರಿಸರ ಬಂಡೆ ಮೇಲೆ ಸೆಲ್ಫಿ ತೆಗೆಯುವುದು. ಪಡುಕರೆ ಬೀಚ್ ಪರಿಸರದಲ್ಲಿ ಬಂಡೆಕಲ್ಲು ಮೇಲೆ ರಿಲೀಸ್ ಮಾಡುವ ದೃಶ್ಯ ಕಂಡುಬಂದಿದೆ. ಇಂತಹ ಹುಚ್ಚಾಟ ಮೆರೆಯುವ ಪ್ರವಾಸಿಗರ ಮೇಲೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದರ ಜೊತೆಗೆ ಪೊಲೀಸ್ ಗಸ್ತು ಹೆಚ್ಚಿಸುವ ಅಗತ್ಯವಿದೆ. ಇಲ್ಲದಿದ್ದರೆ ಅನಾಹುತ ಸಂಭವಿಸುವುದಂತೂ ಗ್ಯಾರಂಟಿ.