ಮಂಗಳೂರು: ಸಮಾಜದಲ್ಲಿ ಜನರು ಸಂತೋಷದಿಂದ ಇರುವ ವಾತಾವರಣ ನಿರ್ಮಾಣ ಮಾಡುವುದು ಸರಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸ್ ನಿರ್ಬಂಧ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸರಕಾರ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಸ್ಪೀಕರ್ ಆಗಿ ನಾನು ಮಾತನಾಡಲು ಆಗುವುದಿಲ್ಲ. ನಮ್ಮ ವೈಯಕ್ತಿಕಅಭಿಪ್ರಾಯ ಯಾವುದೇ ಇದ್ದರೂ ಸಂವಿಧಾನ ಬದ್ದ ಸ್ಥಾನದಲ್ಲಿರುವಾಗ ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದರು.
ಅಧಿವೇಶನದ ಸಂದರ್ಭ ಹರಿಕಥೆ ಎಂಬ ಹೇಳಿಕೆಗೆ ಸಂಬಂಧಿಸಿ ವ್ಯಕ್ತವಾದ ಆಕ್ಷೇಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಜಿಲ್ಲೆಗೆ ವಿಶೇಷ ಗೌರವ ಇದೆ. ಇಲ್ಲಿನ ಶಾಸಕರು ಸೌಜನ್ಯ, ಸರಳ ಸಜ್ಜನಿಕೆಯವರು ಎಂಬ ಗೌರವ ಹಿಂದಿನಿಂದಲೂ ಇದೆ. ಅದನ್ನು ಉಳಿಸಬೇಕಿದೆ ಎಂದು ತಿಳಿಸಿದರು.
ಉಳ್ಳಾಲ ಕಡೆಯಿಂದ ಮಂಗಳೂರು ನಗರಕ್ಕೆ ನೇರ ಅವಕಾಶ ಕಲ್ಪಿಸುವ ಮಹಾಕಾಳಿಪಡು ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡರೂ ಸಾರ್ವಜನಿಕ ಸಂಚಾರಕ್ಕೆ ಇನ್ನೂ ಮುಕ್ತಗೊಳಿಸದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಉಸ್ತುವಾರಿ ಸಚಿವರ ಜತೆ ಚರ್ಚಿಸುವುದಾಗಿ ತಿಳಿಸಿದರು.




