ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಐದನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಯಾಗಿದ್ದವು. ಎಂದಿನಂತೆ ಈ ಪಂದ್ಯದಲ್ಲೂ ತನ್ನ ಸಾಂಘೀಕ ಪ್ರದರ್ಶನ ತೋರಿದ ಕರ್ನಾಟಕ ತಂಡ (Karnataka Cricket Team) ತ್ರಿಪುರ ತಂಡವನ್ನು 80 ರನ್ಗಳಿಂದ ಸೋಲಿಸಿ ಈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಅಂದರೆ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಆಡಿರುವ ಐದಕ್ಕೆ ಐದು ಪಂದ್ಯಗಳು ಗೆಲುವು ಸಾಧಿಸಿದೆ. ಈ ಮೂಲಕ ಎಲೈಟ್ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 332 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ತ್ರಿಪುರ ತಂಡ 252 ರನ್ಗಳಿಗೆ ಆಲೌಟ್ ಆಯಿತು.
ಕರ್ನಾಟಕಕ್ಕೆ ಆರಂಭಿಕ ಆಘಾತ
ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ಈ ಬಾರಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಕರುಣ್ ನಾಯರ್ ಕೂಡ ತಮ್ಮ ಕಳಪೆ ಫಾರ್ಮ್ಗೆ ಬೆಲೆ ತೆತ್ತು ಖಾತೆ ತೆರೆಯದೆ ನಿರ್ಗಮಿಸಿದರು. ಕಳೆದ ಆವೃತ್ತಿಯಲ್ಲಿ ರನ್ಗಳ ಮಳೆ ಹರಸಿದ್ದ ಕರುಣ್ಗೆ ಈ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಆದಾಗ್ಯೂ ತನ್ನ ವೃತ್ತಿಜೀವನದ ಅತ್ಯುತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲೂ ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಪಡಿಕ್ಕಲ್ಗೆ ಸಾಥ್ ನೀಡಿದ ಸ್ಮರಣ್ ರವಿಚಂದ್ರನ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಶತಕದ ಗಡಿ ದಾಟಿಸಿದರು. ಸ್ಮರಣ್ 60 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ವಿಕೆಟ್ ಒಪ್ಪಿಸಿದರು. ಇತ್ತ ಪಡಿಕ್ಕಲ್ ಈ ಆವೃತ್ತಿಯಲ್ಲಿ ಸತತ ನಾಲ್ಕನೇ ಶತಕ ಸಿಡಿಸಿ ಮಿಂಚಿದರು.
ತಮ್ಮ ಇನ್ನಿಂಗ್ಸ್ನಲ್ಲಿ 120 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 108 ರನ್ ಬಾರಿಸಿ ಔಟಾದರು. ಇನ್ನು ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಪರ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು. ರಾಹುಲ್ ಇನ್ನಿಂಗ್ಸ್ 35 ರನ್ಗಳಿಗೆ ಅಂತ್ಯವಾದರೆ, ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್ ಮೂಲಕ 79 ರನ್ಗಳ ಇನ್ನಿಂಗ್ಸ್ ಆಡಿದರು. ಶ್ರೇಯಸ್ ಗೋಪಾಲ್ ಕೂಡ 29 ರನ್ಗಳ ಕಾಣಿಕೆ ನೀಡಿದರು.
80 ರನ್ಗಳಿಂದ ಸೋತ ತ್ರಿಪುರ
ಈ ಗುರಿ ಬೆನ್ನಟ್ಟಿದ ತ್ರಿಪುರ ತಂಡ 60 ರನ್ ದಾಟುವ ಮುನ್ನವೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊಂಚ ಪ್ರತಿರೋಧ ತೊರಿದರು. ಅವರನ್ನು ಹೊರತುಪಡಿಸಿ ರಜತ್ ಕೂಡ 66 ರನ್ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಉಳಿದ ಬ್ಯಾಟ್ಸ್‌ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ತಂಡ 49 ನೇ ಓವರ್ನಲ್ಲಿ ಆಲೌಟ್ ಆಗಿ 80 ರನ್ಗಳಿಂದ ಸೋಲೊಪ್ಪಿಕೊಂಡಿತು.





