ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಹಾರೈಸಿದ ಟ್ರಂಪ್

Share with

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 75 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ವಿಶ್ವದ ಗಣ್ಯಾತೀಗಣ್ಯರು ಶುಭಹಾರೈಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ಶುಭ ಕೋರಿದ್ದಾರೆ.

ರಷ್ಯಾ ತೈಲ ವ್ಯಾಪಾರ ವಿಚಾರದಲ್ಲಿ ಸುಂಕ ಸಮರಕ್ಕಿಳಿದಿದ್ದ ಟ್ರಂಪ್‌ ಮಂಗಳವಾರ, ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ಯಾವುದೇ ಟೀಕೆಯಿಲ್ಲದೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಭಾರತ ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಟೂತ್ ಸೋಶಿಯಲ್ ಮೀಡಿಯಾದಲ್ಲಿ ಟ್ರಂಪ್ “ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅದ್ಭುತವಾದ ಫೋನ್ ಕರೆ ಮಾಡಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ! ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ನರೇಂದ್ರ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!” ಎಂದು ಬರೆದಿದ್ದಾರೆ.

ಮೋದಿ ಕೂಡ ಎಕ್ಸ್ ಪೋಸ್ಟ್ ಮಾಡಿ ” ಸ್ನೇಹಿತ ಅಧ್ಯಕ್ಷ ಟ್ರಂಪ್, ನನ್ನ 75 ನೇ ಹುಟ್ಟುಹಬ್ಬದಂದು ನಿಮ್ಮ ಫೋನ್ ಕರೆ ಮತ್ತು ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ನಿಮ್ಮಂತೆಯೇ, ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಬರೆದಿದ್ದಾರೆ.

ರಷ್ಯಾ ಜತೆಗಿನ ತೈಲ ವ್ಯಾಪಾರವನ್ನು ಮುಂದುವರಿಸಿದ್ದಕ್ಕಾಗಿ ಅಮೆರಿಕ ಕಳೆದ ತಿಂಗಳು ಭಾರತೀಯ ರಪ್ತಿನ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ನಂತರ ಮೊದಲ ಮಾತುಕತೆ ಇದಾಗಿದ್ದು, ಎರಡೂ ಕಡೆಯವರು ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಿದ್ದರಿಂದ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಪುನರ್‌ಸಂಪರ್ಕವು ವೇಗವನ್ನು ಪಡೆದುಕೊಂಡಿದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *