ಉಪ್ಪಳ: ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡ ಘಟನೆ ಪೈವಳಿಕೆ ಬಳಿಯ ಕೋಡಿಯಡ್ಕ ಎಂಬಲ್ಲಿ ನಡೆದಿದೆ.
ಬಾಯಿಕಟ್ಟೆ ನಿವಾಸಿ ಹಮೀದ್ [39] ಇವರ ತಾಯಿ ಕೈಜಮ್ಮ [72] ಗಂಭೀರ ಗಾಯಗೊಂಡಿದ್ದಾರೆ. ಇನ್ನೊಂದು ಕಾರಿನಲ್ಲಿ ಪೆರ್ವೋಡಿ ಬಳಿಯ ಇಬ್ಬರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮಾ.12ರಂದು ಸಂಜೆ ಇಂಡಿಕಾ ಕಾರಿನಲ್ಲಿ ಹಮೀದ್ ಮತ್ತು ಅವರ ತಾಯಿ ಕೈಜಮ್ಮ ಪೈವಳಿಕೆ ಭಾಗದಿಂದ ಬಾಯಿಕಟ್ಟೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆನ್ನಲಾಗಿದೆ.
ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಮೀದ್ ಹಾಗೂ ಅವರ ತಾಯಿ ಕೈಜಮ್ಮ ಮಂಗಳೂರಿನ ಯೂನಿಟ್ ಆಸ್ಪತ್ರೆಯಲ್ಲಿ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈ ಪರಿಸರದಲ್ಲಿ ಎರಡು ವಾರದ ಹಿಂದೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೂರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಪದೇ ಪದೇ ಅಪಘಾತ ಸಂಭವಿಸುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.