ಅಬುಧಾಬಿಯಲ್ಲಿ ಕ್ಷಿಪಣಿಗಳ ಅವಶೇಷಗಳು ಬಿದ್ದು ಓರ್ವ ಭಾರತೀಯ ಸೇರಿ ಇಬ್ಬರು ಮೃತ್ಯು

Share with

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಜಧಾನಿ ಅಬುಧಾಬಿಯ ಮೇಲೆ ನಡೆದ ಕ್ಷಿಪಣಿ ದಾಳಿಯ ಅವಶೇಷಗಳು ಬಿದ್ದ ಪರಿಣಾಮ ಓರ್ವ ಭಾರತೀಯ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಈ ಕುರಿತು ಜೋರ್ಡಾನ್ ವಿದೇಶಾಂಗ ಸಚಿವಾಲಯವು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಗುರುವಾರ (ಮಾ.26) ನಡೆದ ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ, ಮತ್ತೊಬ್ಬರು ಪಾಕಿಸ್ತಾನದ ಪ್ರಜೆ ಎಂದು ಗುರುತಿಸಲಾಗಿದೆ.

ಅಬುಧಾಬಿಯತ್ತ ನುಗ್ಗಿ ಬಂದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆ. ಆದರೆ, ಸ್ಫೋಟಗೊಂಡ ಕ್ಷಿಪಣಿಯ ಚೂರುಗಳು ಅಬುಧಾಬಿಯ ಸ್ವೀಹಾನ್ ರಸ್ತೆಯ ಮೇಲೆ ಬಿದ್ದಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಬಲಿಯಾಗಿದ್ದಾರೆ. ಅಲ್ಲದೆ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಷಿಪಣಿಗಳು ಬಿದ್ದ ರಭಸಕ್ಕೆ ಹಲವಾರು ವಾಹನಗಳೂ ಜಖಂಗೊಂಡಿವೆ ಎಂದು ಹೇಳಲಾಗಿದೆ ಆದರೆ ಈ ವೇಳೆ ವಾಹನದಲ್ಲಿ ಯಾರೂ ಇಲ್ಲದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

ಇರಾನ್ ಹಾಗೂ ಇಸ್ರೇಲ್-ಅಮೆರಿಕ ಜಂಟಿ ಪಡೆಯ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಯುಎಇ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಯುಎಇಯ ಇಂಧನ ಮೂಲಸೌಕರ್ಯಗಳು ಮತ್ತು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇರಾನ್ ಡೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಇದು ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.


Share with

Leave a Reply

Your email address will not be published. Required fields are marked *