ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಕಲಾಕೋಟೆ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೋಹ್ ಮತ್ತು ಸೂಮ್ ಅರಣ್ಯ ವಲಯದಲ್ಲಿ ಅನುಮಾನಾಸ್ಪದ ಚಲನವಲನದ ಮಾಹಿತಿಯ ಮೇರೆಗೆ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಕಲಕೋಟೆ ಪ್ರದೇಶದಲ್ಲಿ ಬ್ರೋಹ್ ಮತ್ತು ಸೂಮ್ ಅರಣ್ಯ ವಲಯವನ್ನು ಸುತ್ತುವರೆದು, ಎನ್ಕೌಂಟರ್ ಆರಂಭಿಸಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದರಿಂದ ಪ್ರತಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯವು ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಇಬ್ಬರು ಉಗ್ರರು ಅಡಗಿರುವ ಶಂಕೆ ಇದೆ. ಅವರು ತಪ್ಪಿಸಿಕೊಳ್ಳದಂತೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.