
ಮಂಜೇಶ್ವರ: ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದು ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದ ಟಿ.ವಿ ಮೆಕಾನಿಕ್ ಮಂಜೇಶ್ವರ ಕಟ್ಟೆ ಬಜಾರ್ ನಿವಾಸಿ ರವಿಚಂದ್ರ ಹೆಗ್ಡೆ [58] ರವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು 2022 ಫೆಬ್ರವರಿ 23ರಂದು ಮೊದಲ ಪುತ್ರಿ ದೀಪಿಕಾಳ ಹುಟ್ಟುಹಬ್ಬ ದಿನದಂದು ಸಿಹಿ ತಿಂಡಿ, ಹೂ ತರಲೆಂದು ಮಂಜೇಶ್ವರ ಒಳ ಪೇಟೆಗೆ ಸ್ಕೂಟರ್ನಲ್ಲಿ ಮಗಳ ಜೊತೆ ತೆರಳುತ್ತಿದ್ದಾಗ ಮಂಜೇಶ್ವರ ಬೀಚ್ ರಸ್ತೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಅಟೋರಿಕ್ಷಾ ಡಿಕ್ಕಿಹೊಡೆದು ಅಪಘಾತ ಉಂಟಾಗಿದೆ. ಈ ವೇಳೆ ಪುತ್ರಿ ದೀಪಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡು ಚರಂಡಿಗೆ ಬಿದ್ದ ರವಿಚಂದ್ರ ಹೆಗ್ಡೆಯವರನ್ನು ಕೂಡಲೇ ಆಸ್ಪತೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ಅಪಘಾತದಿಂದ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಹೊಡೆತ ಉಂಟಾಗಿದ್ದುದರಿAದ ಕೋಮ ಅವಸ್ಥೆಯಲ್ಲಿ ಚಿಕಿತ್ಸೆ ಪಡೇಯುತ್ತಿದ್ದರು. ತಿಂಗಳುಗಳ ಬಳಿಕ ಚೇತರಿಸಿಕೊಂಡು ಬಳಿಕ ಮನೆಗೆ ಕರೆ ತರಲಾಯಿತು. ಆದರೆ ಕಳೆದ ಹಲವು ದಿನಗಳಿಂದ ಅಸೌಖ್ಯ ಉಲ್ಬಣಗೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು [ದಿ] ದೇವರಾಯ ಹೆಗ್ಡೆ ರವರ ಪುತ್ರರಾಗಿದ್ದಾರೆ. ಪತ್ನಿ ಮಂಜುಳಾ ಹೆಗ್ಡೆ, ಪುತ್ರಿ ದೀಕ್ಷಾ, ಸಹೋದರ ವಿನಾಯಕ ಹೆಗ್ಡೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





