ಮಂಗಳೂರು: ಫೆ.21ರಿಂದ 23ರವರೆಗೆ ಕರಾವಳಿ ಜಿಲ್ಲೆಗಳ “ಉದಕ” ಸ್ಥಾನೀಯ ಸಮ್ಮೇಳನ

Share with

ಮಂಗಳೂರು: ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಆಶ್ರಯದಲ್ಲಿ ಕಲಾ ಶಿಕ್ಷಣದ ಪಾಠಗಳು ಕುರಿತಾದ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ “ಉದಕ” ಸ್ಥಾನೀಯ ಸಮ್ಮೇಳನವು ಫೆ.21ರಿಂದ 23ರವರೆಗೆ ಮಂಗಳೂರಿನ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.

ಫೆ.21ರಿಂದ 23ರವರೆಗೆ ಕರಾವಳಿ ಜಿಲ್ಲೆಗಳ "ಉದಕ" ಸ್ಥಾನೀಯ ಸಮ್ಮೇಳನ

ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ವಾಂಸರು, ಕಲಾವಿದರು, ಕಲಾ ಶಿಕ್ಷಣ ತಜ್ಞರು, ಶಿಕ್ಷಕರು ಭಾಗವಹಿಸಲಿದ್ದು ಸ್ಥಳೀಯ ಕಲೆಯ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಮತ್ತು ತರಗತಿಯ ಬೋಧನೆ-ಕಲಿಕೆಯ ಅನುಭವಗಳನ್ನು ಹೇಗೆ ಶ್ರೀಮಂತಗೊಳಿಸಬಹುದು ಎಂಬ ಬಗ್ಗೆ ವಿಚಾರ-ವಿಮರ್ಶೆ ನಡೆಸಲಿದ್ದಾರೆ ಮತ್ತು ಶಿಕ್ಷಕರು, ಕಲಾವಿದರು ಮತ್ತು ಕಲಾ ಶಿಕ್ಷಣ ತಜ್ಞರು ಪಠ್ಯಕ್ರಮದಲ್ಲಿ ಸಮನ್ವಯತೆಯನ್ನು ಸಾಧಿಸಲು ಕಲೆಯ ವಿವಿಧ ಪ್ರಕಾರಗಳು ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ವಿಚಾರ ಗೋಷ್ಠಿಗಳು, ಪ್ರಾತ್ಯಕ್ಷತೆಗಳು ಮತ್ತು ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಫೆ.21ರಂದು ಬೆಳಿಗ್ಗೆ ಐಎಫ್‌ಎ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಮೇನಕ ರೋಡ್ರಿಗಸ್‌ ಅವರು ಸಮ್ಮೇಳನಕ್ಕೆ ಚಾಲನೆ ನೀಡುವರು. ಸಂಸ್ಥೆಯ ಕಲಾ ಶಿಕ್ಷಣ ವಿಭಾಗದ ಹಿರಿಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಟಿ.ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾರೆ. ಬಳಿಕ ನಡೆಯುವ ಮೊದಲ ಗೋಷ್ಠಿಯು ʼಕಲಾ ಶಿಕ್ಷಣ: ಭಾಷಾ ಕಲೆ-ಅನುಭವ ಮತ್ತು ಅಭಿವ್ಯಕ್ತಿʼ ಎಂಬ ವಿಷಯದಲ್ಲಿ ನಡೆಯಲಿದ್ದು, ಹಿರಿಯ ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲ್‌ ಧಾರವಾಡ ಅವರು ನೇತೃತ್ವ ವಹಿಸುವರು.

ಶಿಕ್ಷಕರಾದ ಅಕ್ಷತಾ ಕೃಷ್ಣ ಮೂರ್ತಿ ಝೋಯಿಡಾ, ನಾಗರಾಜ ಎಂ.ಹುಡೇದ ಹಾವೇರಿ, ಸುಳ್ಯದ ಪ್ರಕಾಶ್‌ ಮೂಡಿತ್ತಾಯ, ಬಹುಭಾಷಾ ಕವಿ ಮಹಮ್ಮದ್‌ ಬಡ್ಡೂರು ವಿಷಯ ಮಂಡಿಸಲಿದ್ದಾರೆ. ಅಪರಾಹ್ನದ ಬಳಿಕ ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ ಎನ್ನುವ ಕಾರ್ಯಾಗಾರ ನಡೆಯಲಿದ್ದು, ಸಿದ್ದಿ ಸಮುದಾಯದ ಕೌದಿ ಕಲಾವಿದರಾದ ಹಜರಂಬಿ, ಹುಸೇನಬಿ, ಹತ್ತರಬಿ, ಮತ್ತು ಸಖೀನಾ ಅವರು ಸುಗಮಕಾರರಾದ ಅನಿತಾ ಎನ್ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಹಿರಿಯ ಜಾನಪದ ವಿದ್ವಾಂಸ, ಶಿಕ್ಷಣ ತಜ್ಞ ಡಾ| ಕೆ ಚಿನ್ನಪ್ಪಗೌಡ ಅವರು ಮುಖ್ಯ ಭಾಷಣಮಾಡುವರು. ಸಂಜೆ 7.30ರಿಂದ ತುಳು ಪಾಡ್ದನ-ನಟ್ಟಿ ಹಾಡುಗಳ ಪ್ರದರ್ಶನ ನಡೆಯಲಿದ್ದು, ಕುಂಬ್ಳೆಯ ಜಾನಪದ ಕಲಾವಿದ ಬಟ್ಟುಮೂಲ್ಯ ಹಾಗೂ ಮಂಜೇಶ್ವರದ ಸಹಶಿಕ್ಷಕ ಪ್ರದೀಪ ಕುಮಾರ್‌ ಭಾಗವಹಿಸಲಿದ್ದಾರೆ.

ಫೆ.22ರಂದು ಬೆಳಿಗ್ಗೆ ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ ಕಾರ್ಯಾಗಾರ ಮುಂದುವರಿಯಲಿದೆ. ಅಪರಾಹ್ನ 2.45ರಿಂದ ಹೊನ್ನಾವರದ ಅಳ್ಳಂಕಿ ಡಾ| ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಂದ ಸುಗ್ರೀವ ಸಖ್ಯ ಎನ್ನುವ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಜೆ 6ರಿಂದ ʼಕಲಾ ಶಿಕ್ಷಣ: ಪರಿಕಲ್ಪನೆಗಳು ಮತ್ತು ಪ್ರಾದೇಶಿಕ ಸವಾಲುಗಳುʼ ಕುರಿತಾದ ಗೋಷ್ಠಿ ನಡೆಯಲಿದ್ದು, ಹಿರಿಯ ರಂಗಕರ್ಮಿ ಐಕೆಬೊಳುವಾರು ನೇತೃತ್ವ ವಹಿಸುವರು. ಉಡುಪಿ ಡಯಟ್‌ ನ ಉಪಪ್ರಾಂಶುಪಾಲ ಡಾ|ಅಶೋಕ್ ಕಾಮತ್, ಮೈಸೂರಿನ ಜಾನಪದ ಸಂಶೋಧಕಿ ಡಾ| ಶ್ವೇತ ಮಡಪ್ಪಾಡಿ, ವಾಸ್ತಶಿಲ್ಪಿ ಸುಭಾಸ್ ಚಂದ್ರ ಬಸು, ದೃಶ್ಯಕಲಾವಿದ ನೇಮಿರಾಜ ಶೆಟ್ಟಿ, ಪತ್ರಕರ್ತ ಮೌನೇಶ್ ವಿಶ್ವಕರ್ಮ, ಕುಂದಾಪುರದ ಸಹಶಿಕ್ಷಕ ಡಾ|ಸದಾನಂದ ಬೈಂದೂರ್ ವಿಷಯ ಮಂಡಿಸುವರು.

ಫೆಬ್ರವರಿ 23ರಂದು ಬೆಳಿಗ್ಗೆ ʼಕಲಾ ಶಿಕ್ಷಣ: ವಿಧಾನಗಳು ಮತ್ತು ಅಭ್ಯಾಸಗಳಲ್ಲಿ ಪ್ರಯೋಗಗಳುʼ ಎನ್ನುವ ಕುರಿತಾಗಿ ಗೋಷ್ಠಿ ನಡೆಯಲಿದ್ದು, ಸಂಶೋಧಕಿ ಡಾ|ಗಾಯತ್ರಿ ನಾವಡ ನೇತೃತ್ವದ ವಹಿಸುವರು. ಸಹಶಿಕ್ಷಕಿ ಪ್ರಜ್ಞಾ ಹೆಗಡೆ ಶಿರಸಿ, ರಂಗ ನಿರ್ದೇಶಕ ಕ್ರಿಸ್ಟೋಫರ್, ಕುಂದಾಪುರದ ಸಹಶಿಕ್ಷಕ ಉದಯ ಗಾಂವ್ಕರ್‌, ಹಿರಿಯ ರಂಗಕರ್ಮಿ ಕಿರಣ್‌ ಭಟ್‌ ಹೊನ್ನಾವರ ವಿಚಾರ ಮಂಡಿಸಲಿದ್ದಾರೆ. ಅಪರಾಹ್ನದ ಬಳಿಕ ಸಿದ್ದಿ ಸಮುದಾಯದೊಂದಿಗೆ ಕೌದಿ ಕಲಿಕೆ ಕಾರ್ಯಾಗಾರ ಚರ್ಚೆ-ಸಂವಾದದೊಂದಿಗೆ ಮುನ್ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಐಎಫ್‌ ಎ ಯ ಕಲಾ ಶಿಕ್ಷಣ ವಿಭಾಗದ ಕಾರ್ಯನಿರ್ವಹಣಾಧಿಕಾರಿ ರಾಧಿಕಾ ಭಾರದ್ವಾಜ್ ಭಾಗವಹಿಸಲಿದ್ದಾರೆ. ಐಎಫ್‌ ಎ ಆಯೋಜಿಸಿರುವ ಈ ಪ್ರಾದೇಶಿಕ ಸಮ್ಮೇಳನದ ಆಯೋಜನೆಗೆ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪೆನಿ ಸಹಕಾರ ನೀಡುತ್ತಿದ್ದು, ೬೦ಕ್ಕೂ ಅಧಿಕ ಶಿಕ್ಷಕರು ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಕಾರ್ಯಕ್ರಮ ಸಂಯೋಜನಾಧಿಕಾರಿ ಕೃಷ್ಣಮೂರ್ತಿ(8762954080)ಯವರನ್ನು ಸಂಪರ್ಕಿಸಬಹುದು ಎಂದು ಐಎಫ್‌ಎ ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *